Wednesday, January 14, 2026
Wednesday, January 14, 2026
spot_img

ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ: ಮಣಿಕಂಠನ ಜ್ಯೋತಿ ದರುಶನಕ್ಕೆ ಕ್ಷಣಗಣನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕರ ಸಂಕ್ರಾಂತಿಯ ಪುಣ್ಯಕಾಲ ಬಂದೊಡನೆ ದೇಶಾದ್ಯಂತ “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂಬ ಘೋಷ ಮೊಳಗುತ್ತಿದೆ. ಮಣಿಕಂಠನ ದರ್ಶನಕ್ಕಾಗಿ ಮಾಲೆ ಧರಿಸಿ, ಕಠಿಣ ವ್ರತ ಪೂರೈಸಿ, ಇರುಮುಡಿ ಹೊತ್ತು ಶಬರಿಮಲೆಗೆ ತೆರಳುವ ಭಕ್ತರ ಸಂಭ್ರಮಕ್ಕೆ ಇಂದು ಮಕರ ಜ್ಯೋತಿಯ ದರ್ಶನದೊಂದಿಗೆ ಪರಾಕಾಷ್ಠೆ ತಲುಪಲಿದೆ.

ವೇದದ ಮಹಾವಾಕ್ಯವಾದ “ತತ್ವಮಸಿ” ಎಂಬ ತತ್ವದಡಿ ಸಾಗುವ ಈ ಯಾತ್ರೆ, ಭಕ್ತರನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನತ್ತ ಕೊಂಡೊಯ್ಯುವ ಪವಿತ್ರ ಹಾದಿಯಾಗಿದೆ. ಲಕ್ಷಾಂತರ ಭಕ್ತರು ಮಕರ ಸಂಕ್ರಾಂತಿಯ ಈ ಸಂದರ್ಭದಲ್ಲಿ ಶಬರಿಮಲೆಗೆ ಆಗಮಿಸಿ, ಅಯ್ಯಪ್ಪನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡುತ್ತಾರೆ.

ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ ಮೂಡುವ ದಿವ್ಯ ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಸ್ವತಃ ಅಯ್ಯಪ್ಪ ಸ್ವಾಮಿಯೇ ಜ್ಯೋತಿ ರೂಪದಲ್ಲಿ ಬಂದು ಭಕ್ತರನ್ನು ಹರಸುತ್ತಾನೆ ಎಂಬ ಅಚಲ ನಂಬಿಕೆ ಈ ಆಚರಣೆಯ ಹಿಂದಿದೆ. ಈಗಾಗಲೇ ಶಬರಿಮಲೆ ಕ್ಷೇತ್ರವು ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಭಕ್ತರಿಂದ ತುಂಬಿ ತುಳುಕುತ್ತಿದ್ದು, ಭಕ್ತಿಭಾವ ಪರವಶವಾಗಿದೆ.

ಭಕ್ತರ ಭಾರಿ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರ ಮತ್ತು ದೇವಸ್ವಂ ಮಂಡಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಭಕ್ತರ ಅನುಕೂಲಕ್ಕಾಗಿ ವಿಶೇಷವಾಗಿ 1,000 ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಆರೋಗ್ಯ ಮತ್ತು ಭದ್ರತಾ ಸೇವೆಗಳನ್ನು ಹೆಚ್ಚಿಸಲಾಗಿದೆ. ಇಂದು ಸಂಜೆ ಜ್ಯೋತಿ ದರ್ಶನದೊಂದಿಗೆ ಮಾಲಾಧಾರಿಗಳ ಕಠಿಣ ಉಪವಾಸ ವ್ರತಕ್ಕೆ ಮಂಗಲ ಹಾಡಲಾಗುವುದು.

Most Read

error: Content is protected !!