ಹೊಸದಿಗಂತ ಬೆಳಗಾವಿ:
ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ, ಗುಡ್ಡ ಕುಸಿತವುಂಟಾಗಿದ್ದು, ಬೆಳಗಾವಿ – ಗೋವಾ ಮಾರ್ಗದ ಅನ್ಮೋದ್ ಘಾಟ್ ನಲ್ಲಿ ಹೆದ್ದಾರಿಯೂ ಬಿರುಕು ಬಿಟ್ಟಿದ್ದು ಆತಂಕ ಸೃಷ್ಟಿಸಿದೆ.
ಬೆಳಗಾವಿ -ಗೋವಾ ಹೆದ್ದಾರಿಯ ಅನ್ಮೋದ್ ಘಾಟ್ ನಲ್ಲಿಯ ದೂದ್ ಸಾಗರ್ ದೇಗುಲದ ಬಳಿ ಗುರುವಾರ ಒಂದು ಕಿಲೋ ಮೀಟರ್ ಕೆಳಗೆ ಬಿರುಕು ಬಿಟ್ಟಿದ್ದರರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.
ಈ ಹಿನ್ನೆಲೆಯಲ್ಲಿ ಕುಳೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಗುನ್ ಸಾವಂತ್ ಮತ್ತು ಫೊಂಡಾ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಕೃಷ್ಣ ಸಿನೇರಿ ಅವರ ನೆರವಿನೊಂದಿಗೆ ಗುಡ್ಡ ಕುಸಿತದಿಂದ ರಸ್ತೆಯಲ್ಲಿ ಬಿದ್ದಿದ್ದ ಕಲ್ಲು ಮಣ್ಣನ್ನು ತೆರವುಗೊಳಿಸಿ, ಬಿರುಕು ಬಿಟ್ಟ ಸ್ಥಳದಲ್ಲಿ ದುರಸ್ತಿ ಕಾರ್ಯ ಕೈಗೊಂಡರು. ಬಳಿಕವಷ್ಟೇ ಹೆದ್ದಾರಿ ಸಂಚಾರಕ್ಕೆ ಮುಕ್ತವಾಯಿತು.
ಆದರೂ ಸಹ ನಿರಂತರ ಮಳೆಯಿಂದಾಗಿ ಈ ಮಾರ್ಗದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೇ, ಕ್ಯಾಸರಲಾಕ್ ನಿಂದ ದೂದ್ ಸಾಗರ್ ಜಲಪಾತದವರೆಗಿನ ರೈಲು ಮಾರ್ಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ರೈಲು ಮಾರ್ಗದಲ್ಲಿಯೂ ಬಿರುಕು ಬೀಳದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.