ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅವರ ಕಿರೀಟಕ್ಕೆ ಮತ್ತೊಂದು ಹೊಳೆಯುವ ಗರಿ ಸೇರ್ಪಡೆಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕುವ ಮೂಲಕ ಕಿಂಗ್ ಕೊಹ್ಲಿ ಈಗ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಶ್ರೀಲಂಕಾದ ಎಡಗೈ ಬ್ಯಾಟರ್ ಕುಮಾರ ಸಂಗಕ್ಕಾರ ಅವರು 2000 ರಿಂದ 2015 ರವರೆಗೆ ಆಡಿದ 594 ಪಂದ್ಯಗಳಿಂದ 28,016 ರನ್ ಗಳಿಸಿ ದಶಕಕ್ಕೂ ಹೆಚ್ಚು ಕಾಲ ಎರಡನೇ ಸ್ಥಾನದಲ್ಲಿದ್ದರು. ಆದರೆ, ಕೇವಲ 557 ಪಂದ್ಯಗಳಲ್ಲೇ ಈ ದಾಖಲೆಯನ್ನು ಅಳಿಸಿ ಹಾಕಿರುವ ವಿರಾಟ್ ಕೊಹ್ಲಿ, ಒಟ್ಟು 28,068 ರನ್ ಗಳಿಸುವ ಮೂಲಕ ವಿಶ್ವದ ‘ರನ್ ಸರದಾರ’ ಎನಿಸಿಕೊಂಡಿದ್ದಾರೆ.
ಈಗ ಕೊಹ್ಲಿಗಿಂತ ಮುಂದಿರುವುದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಾತ್ರ. ಸಚಿನ್ 664 ಪಂದ್ಯಗಳಿಂದ 34,357 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಅವರ ಈ ಸಾರ್ವಕಾಲಿಕ ದಾಖಲೆ ಮುರಿಯಲು ಕೊಹ್ಲಿಗೆ ಇನ್ನು 6,289 ರನ್‌ಗಳ ಅಗತ್ಯವಿದೆ.
ವಿರಾಟ್ ಕೊಹ್ಲಿ ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವುದರಿಂದ, ಸಚಿನ್ ಅವರ ಬೃಹತ್ ದಾಖಲೆಯನ್ನು ಮುರಿಯುವುದು ಸವಾಲಿನ ಕೆಲಸವಾಗಿ ಕಾಣುತ್ತಿದೆ. ಆದರೂ, ಸದ್ಯಕ್ಕೆ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ.


