ಗಂಭೀರ್ ಜೊತೆ ಮುನಿಸು: ಬಿಸಿಸಿಐಗೆ ಕೊಹ್ಲಿ ಕೊಟ್ರು ಸ್ಪಷ್ಟ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಕ್ರಿಕೆಟ್ ತಂಡದ ನೂತನ ಹೆಡ್‌ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾಗಿದ್ದಾರೆ. ಇತ್ತ ಹಲವು ಅಭಿಮಾನಿಗಳು ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರ ನಡುವಿನ ಹೊಂದಾಣಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಯಾಕೆಂದರೆ ಗಂಭೀರ್ ಹಾಗೂ ಕೊಹ್ಲಿ ನಡುವೆ ಐಪಿಎಲ್ ಸಂದರ್ಭದಲ್ಲಿ ಕೆಲವು ಬಾರಿ ಮಾತಿನ ಚಕಮಕಿ ನಡೆಸಿದ್ದರು. ಇದೀಗ ಮತ್ತೆ ಅದು ಮುಂದುವರಿಯಲಿದೆ ಎಂಬ ಆತಂಕ ಮೂಡಿದೆ.

ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ವಿರಾಟ್ ಕೊಹ್ಲಿ, ಶ್ರೀಲಂಕಾ ಎದುರಿನ ಏಕದಿನ ಸರಣಿಯನ್ನಾಡಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಕೊಹ್ಲಿ ಮೈದಾನಕ್ಕಿಳಿಲು ಸಜ್ಜಾಗಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ಇದರ ಬೆನ್ನಲ್ಲೇ ಈ ವಿಚಾರವಾಗಿ ವಿರಾಟ್ ಕೊಹ್ಲಿ ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಈ ಹಿಂದಿನ ಗಂಭೀರ್ ಜತೆಗಿನ ವಾಗ್ವಾದವು ತಮ್ಮ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು Cricbuzz ವರದಿ ಮಾಡಿದೆ.

ನಾವಿಬ್ಬರೂ ತಂಡಕ್ಕೆ ಒಳಿತಾಗಬೇಕು ಎನ್ನುವ ಸಾಮಾನ್ಯ ಉದ್ದೇಶವನ್ನೇ ಇಟ್ಟುಕೊಂಡಿದ್ದೇವೆ. ಇದರಿಂದ ಭಾರತ ಕ್ರಿಕೆಟ್ ತಂಡಕ್ಕೆ ಅನುಕೂಲ ಆಗಲಿದೆ. ಇದರ ಬಗ್ಗೆ ಬಿಸಿಸಿಐ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎನ್ನುವ ಭರವಸೆಯನ್ನು ಕೊಹ್ಲಿ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಮೊದಲು ಐಪಿಎಲ್ ಟೂರ್ನಿಗಳಲ್ಲಿ ಎದುರು ಬದುರಾಗಿದ್ದಾಗ ಸಾಕಷ್ಟು ಬಾರಿ ಮಾತಿನ ಚಕಮಕಿ ನಡಿಸಿದ್ದ ಈ ಜೋಡಿ, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆ ಇಬ್ಬರೂ ಮುನಿಸು ಮರೆತು ನಗುನಗುತ್ತಾ ಮಾತಾಡಿದ್ದರು. ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿದ್ದ ವೇಳೆಯಲ್ಲಿ ವಿರಾಟ್ ಕೊಹ್ಲಿಯನ್ನು ಆತ್ಮೀಯವಾಗಿ ಮಾತನಾಡಿಸಿದ್ದ ವಿಡಿಯೋಗಳು ಸಾಕಷ್ಟು ವೈರಲ್ ಆಗಿತ್ತು.

ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 27ರಿಂದ ಆರಂಭವಾಗಲಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿರುವುದರಿಂದ, ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ ಆಗಸ್ಟ್ 2ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿ ವೇಳೆಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡ ಕೂಡಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!