Wednesday, January 14, 2026
Wednesday, January 14, 2026
spot_img

ಬೆಂಗಳೂರು ಏರ್ ಕ್ವಾಲಿಟಿ ಅಪ್‌ಡೇಟ್: ಸ್ವಲ್ಪ ನಿರಾಳ ತಂದರೂ ದೂರವಾಗಿಲ್ಲ ಶ್ವಾಸಕೋಶದ ಕಾಯಿಲೆಗಳ ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಅಬ್ಬರ ತುಸು ತಗ್ಗಿದಂತೆ ಕಾಣುತ್ತಿದ್ದರೂ, ಪರಿಸ್ಥಿತಿ ಮಾತ್ರ ಇನ್ನೂ ಆತಂಕಕಾರಿಯಾಗಿಯೇ ಉಳಿದಿದೆ. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ವಾಯು ಗುಣಮಟ್ಟ ಸೂಚ್ಯಂಕ ಅಲ್ಪ ಸುಧಾರಣೆ ಕಂಡಿದೆ. ಆದರೆ ತಜ್ಞರ ಪ್ರಕಾರ, ಈ ಸುಧಾರಣೆ ತಾತ್ಕಾಲಿಕವಾಗಿದ್ದು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.

ಸದ್ಯ ಬೆಂಗಳೂರಿನ ಗಾಳಿಯ ಗುಣಮಟ್ಟ ಸೂಚ್ಯಂಕ 170 ರಷ್ಟಿದೆ. ಕಳೆದ ಡಿಸೆಂಬರ್‌ನಲ್ಲಿ ಇದು 200ರ ಗಡಿ ದಾಟಿ ತೀವ್ರ ಆತಂಕ ಸೃಷ್ಟಿಸಿತ್ತು. ವಿಶೇಷವಾಗಿ ಸಿಲ್ಕ್ ಬೋರ್ಡ್ ಮತ್ತು ವೈಟ್​ಫೀಲ್ಡ್‌ನಂತಹ ಜನನಿಬಿಡ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಿದೆ. ವಾತಾವರಣದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದ್ದರೂ, ಪ್ರಸ್ತುತ ಇರುವ 170 ಸೂಚ್ಯಂಕವು ‘ಅನಾರೋಗ್ಯಕಾರಿ’ ಹಂತಕ್ಕೆ ಸೇರುತ್ತದೆ. ಹೀಗೆಯೇ ಮುಂದುವರಿದರೆ ಬೆಂಗಳೂರು ಕೂಡ ದೆಹಲಿಯಂತೆ ಗಂಭೀರ ಪರಿಸ್ಥಿತಿ ಎದುರಿಸಬೇಕಾದೀತು ಎಂದು ತಜ್ಞರು ಎಚ್ಚರಿಸಿದ್ದಾರೆ.

ನಗರದ ವಾಯುಮಂಡಲದಲ್ಲಿ ಪ್ರಸ್ತುತ PM2.5 ಪ್ರಮಾಣ 83 ಮತ್ತು PM10 ಪ್ರಮಾಣ 104 ರಷ್ಟಿದೆ. ಇದು ಮಾನವನ ಕೂದಲಿನ ಎಳೆಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳು. ಇವು ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿಸೂಕ್ಷ್ಮ ಕಣಗಳಾಗಿದ್ದು, ಇವುಗಳೇ ಹೆಚ್ಚು ಅಪಾಯಕಾರಿ.

ಈ ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶವನ್ನು ಪ್ರವೇಶಿಸಿ, ಅಲ್ಲಿಂದ ರಕ್ತಕ್ಕೆ ಸೇರುತ್ತವೆ. ಇದು ಕೇವಲ ನೆಗಡಿ, ಕೆಮ್ಮು ಮಾತ್ರವಲ್ಲದೆ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳಿಗೆ ಕಾರಣವಾಗಬಹುದು.

ವಾಹನಗಳ ಹೊಗೆ, ರಸ್ತೆ ಧೂಳು ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳಿಂದ ಉಂಟಾಗುತ್ತಿರುವ ಈ ಮಾಲಿನ್ಯವು ಮಕ್ಕಳು, ಹಿರಿಯ ನಾಗರಿಕರು ಹಾಗೂ ಈಗಾಗಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ನಗರವಾಸಿಗಳು ಸಾಧ್ಯವಾದಷ್ಟು ಮಾಸ್ಕ್ ಧರಿಸುವುದು ಮತ್ತು ಮಾಲಿನ್ಯ ಪ್ರದೇಶಗಳಿಂದ ದೂರವಿರುವುದು ಒಳಿತೆಂದು ಸೂಚಿಸಲಾಗಿದೆ.

Most Read

error: Content is protected !!