ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ದಾಳಿ ಹೆಚ್ಚುತ್ತಿದೆ. ಈ ಹಿನ್ನೆಲೆ ಉಗ್ರರನ್ನ ಮಟ್ಟ ಹಾಕುವ ಪಣ ತೊಟ್ಟಿರುವ ಭಾರತೀಯ ಸೇನೆ 500 ಕ್ಕೂ ಹೆಚ್ಚು ಪ್ಯಾರಾ ಕಮಾಂಡೋಗಳನ್ನು ಜಮ್ಮುವಿನಲ್ಲಿ ನಿಯೋಜಿಸಿದೆ.
ಈ ಪ್ಯಾರಾ ಕಮಾಂಡೋಗಳು ಪಾಕಿಸ್ತಾನಿ ಮೂಲದ ಉಗ್ರರ ಬೇಟೆಯಲ್ಲಿ ತೊಡಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ 50-55 ಉಗ್ರರು ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಸೇನೆ ಭದ್ರತೆಯನ್ನು ಹೆಚ್ಚಿಸಿದೆ. ಇನ್ನು ಕಳೆದ ವಾರದಿಂದ ನಡೆಯುತ್ತಿರುವ ಉಗ್ರರ ದಾಳಿ ಹಿಂದೆ ಪಾಕಿಸ್ತಾನ ನಿವೃತ ಸೈನಿಕರು ಅಥವಾ ಸೇನಾ ತರಬೇತಿ ಇರುವ ಉಗ್ರರ ಕೈವಾಡ ಇರುವ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಬೈನಾಕ್ಯುಲರ್ ಅಳವಡಿಸಲಾಗಿರುವ M-4 US ಕಾರ್ಬೈನ್‌ಗಳು, ಚೈನೀಸ್ ಸ್ಟೀಲ್ ಕೋರ್ ಬುಲೆಟ್‌ಗಳು ಮತ್ತು ನಿಖರವಾದ ಗುಂಡಿನ ದಾಳಿಯನ್ನು ಗಮನಿಸಿದರೆ ಈ ಪ್ರದೇಶದಲ್ಲಿ ಇತ್ತೀಚಿನ ದಾಳಿಗಳಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ನಿವೃತ್ತ ಪಾಕಿಸ್ತಾನ ಸೇನೆಯ ವಿಶೇಷ ಸೇವಾ ಗುಂಪಿನ (SSG) ಸೇರಿದವರಾಗಿರಬಹುದು ಅಥವಾ ಗೆರಿಲ್ಲಾ ಯುದ್ಧದಲ್ಲಿ ಚೆನ್ನಾಗಿ ತರಬೇತಿ ಪಡೆದ ಭಯೋತ್ಪಾದಕರಾಗಿರಬಹುದು ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಸಾಧನಗಳನ್ನು ಹೊಂದಿರುವ ಭಯೋತ್ಪಾದಕರ ಪತ್ತೆ ಮಾಡಿ ಬೇಟೆಯಾಡಲು ಭೂಸೇನೆಯು ಕಾರ್ಯತಂತ್ರ ರೂಪಿಸಿದೆ. ಉಗ್ರರ ಉಪಟಳದ ಪ್ರದೇಶದಲ್ಲಿ ಈಗಾಗಲೇ ಇರುವ ಭಯೋತ್ಪಾದನಾ ನಿಗ್ರಹ ಪಡೆಗಳ ಸಹಾಯವನ್ನೂ ಸೇನೆ ಪಡೆದುಕೊಂಡಿದೆ.