ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಅಕ್ಟೋಬರ್‌ನಲ್ಲಿ ಹರಿಯಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಪ್ರಚಾರ ಆರಂಭಿಸಿದೆ. ಹಲವು ಉಚಿತ ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ.
ಹರಿಯಾಣದಲ್ಲಿಂದು ನಡೆದ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ʻಕೇಜ್ರಿವಾಲ್ ಕಿ ಗ್ಯಾರಂಟಿʼ ಘೋಷಣೆ ಮಾಡಿದ್ದಾರೆ. ಸುನೀತಾ ಕೇಜ್ರಿವಾಲ್ , ಆಪ್ ಹಿರಿಯ ನಾಯಕ ಸಂಜಯ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಇತರ ಆಪ್ ನಾಯಕರು ಗ್ಯಾರಂಟಿ ಪತ್ರಗಳನ್ನ ಬಿಡುಗಡೆ ಮಾಡಿದ್ದಾರೆ.
24 ಗಂಟೆ ಉಚಿತ ವಿದ್ಯುತ್ ಸರಬರಾಜು, ಪ್ರತಿಯೊಬ್ಬರಿಗೂ ಉಚಿತ ವೈದ್ಯಕೀಯ ಚಿಕಿತ್ಸೆ, ಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣ, ನಿರುದ್ಯೋಗ ಯುವಕರಿಗೆ ಉದ್ಯೋಗ ಮತ್ತು ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರೂ. ನೀಡುವುದಾಗಿ ಆಪ್ ಘೋಷಣೆ ಮಾಡಿದೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸುನೀತಾ ಕೇಜ್ರಿವಾಲ್, ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ದೆಹಲಿ ಮತ್ತು ಪಂಜಾಬ್‌ನಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ಮುಂದುವರಿದು ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸೂಚಿಸಿದ್ದಾರೆಂದು ತಿಳಿಸಿದರು.
ಕೇಜ್ರಿವಾಲ್ ಹುಟ್ಟಿ ಬೆಳೆದಿದ್ದು ಹರಿಯಾಣದ ಹಿಸಾರ್‌ನಲ್ಲಿ. ಇಲ್ಲಿ ಹುಟ್ಟಿದ ಹುಡುಗನೊಬ್ಬ ರಾಷ್ಟ್ರ ರಾಜಧಾನಿಯನ್ನು ಆಳುತ್ತಾನೆ ಅಂತ ಯಾರೊಬ್ಬರು ಸಹ ಕನಸಿನಲ್ಲೂ ಊಹಿಸಿರಲಿಲ್ಲ. ಇದು ಯಾವುದೇ ಪವಾಡಕ್ಕಿಂತ ಕಡಿಮೆಯೇನಿಲ್ಲ. ಅವರು ಇನ್ನೂ ಏನಾದರೂ ಮಹತ್ಕಾರ್ಯ ಮಾಡಬೇಕು ಆ ದೇವರು ಬಯಸಿದ್ದಾನೆ ಎಂದು ಭಾವುಕರಾದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಹರಿಯಾಣದ ಎಲ್ಲಾ 90 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಪ್ ನಿರ್ಧರಿಸಿದೆ.