ದಿಗಂತ ವರದಿ ಅಂಕೋಲಾ :
ಶಿರೂರು ಗುಡ್ಡ ಕುಸಿತದಲ್ಲಿ ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ ಚಾಲಕನೋರ್ವ ನಾಪತ್ತೆ ಆಗಿರುವುದಾಗಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವುದರೊಂದಿಗೆ ಕಾಣೆಯಾದವರ ಸಂಖ್ಯೆ 11ಕ್ಕೇರಿದೆ.
ತಮಿಳುನಾಡು ರಾಜ್ಯದ ಪಪ್ಪಿನೈಕೆನಟ್ಟಿ ನಾಮಕಲ್‌ನ ಕರಯನ್ ಪುದೂರು, ಮಾರಿಯಮ್‌ನ್ ಕೊವಿಲ್ ನಿವಾಸಿ ಶರವಣನ್ ತಂದೆ ಷಣ್ಮುಗಮ್ (38) ನಾಪತ್ತೆಯಾದ ಗ್ಯಾಸ್ ಟ್ಯಾಂಕರ್ ಚಾಲಕ. ಈತನ ತಾಯಿ ಮೋಹನಾ ಷಣ್ಮುಗಮ್ ಈಕೆಯು ಅಂಕೋಲಾ ಠಾಣೆಯಲ್ಲಿ ತನ್ನ ಮಗ ನಾಪತ್ತೆಯಾಗಿರುವ ದೂರಿನಲ್ಲಿ ತಿಳಿಸಿದಂತೆ ಮಂಗಳೂರಿನಲ್ಲಿ ಟ್ಯಾಂಕರ್ ನಂ.ಕೆಎ-01,ಎಎಚ್-2166 ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಮಂಗಳೂರಿನಿಂದ ಗ್ಯಾಸ್‌ನ್ನು ತುಂಬಿಕೊಂಡು ಧಾರವಾಡಕ್ಕೆ ಹೋಗಿ ಗ್ಯಾಸ್‌ನ್ನು ಖಾಲಿ ಮಾಡಿಕೊಂಡು ವಾಪಸ್ ಮಂಗಳೂರಿಗೆ ಮರಳುವಾಗ ಜು. 16 ರಂದು ಬೆಳಿಗ್ಗೆ 8.30ರ ಸುಮಾರಿಗೆ ಅಂಕೋಲಾ ತಾಲೂಕಿನ ಶಿರೂರು ಹತ್ತಿರ ಚಹಾ ಕುಡಿಯಲು ನಿಂತಿದ್ದಾಗ ರಸ್ತೆಯ ಬದಿಯ ಲ್ಲಿದ್ದ ಗುಡ್ಡ ಕುಸಿದು ಮಣ್ಣಿನ ಅಡಿಯಲ್ಲಿ ಸಿಲುಕಿ ಅಥವಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಕಾಣಿ ಯಾಗಿದ್ದು, ಆತನು ಚಲಾಯಿಸಿಕೊಂಡಿದ್ದ ಲಾರಿ ಗುಡ್ಡ ಕುಸಿತವಾದ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಈ ಕುರಿತು ಪಿಎಸ್‌ಐ ಉದ್ದಪ್ಪ ಧರೆಪ್ಪನವರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.