ಹೊಸದಿಗಂತ ಬೆಳಗಾವಿ:
ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದ ಈರಪ್ಪ ನಾಗಪ್ಪ ಅಬ್ಬಾಯಿ ಎಂಬ ರೈತರು ದಿನನಿತ್ಯ ಹೊಲದಲ್ಲಿ ದುಡಿಯುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಈ ರೈತ ಕಳೆದ 2021ರಲ್ಲೇ ಮರಣ ಹೊಂದಿದ್ದಾರೆ. ಕಣ್ಣೆದುರೇ ಬದುಕಿರುವ ರೈತನಿಗೆ ಮರಣ ಪ್ರಮಾಣಪತ್ರ ನೀಡಿರುವ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಈಗ ಲೋಕಾಯುಕ್ತರು ಕೆಂಡಾಮಂಡಲವಾಗಿದ್ದಾರೆ.
ಕಳೆದ ಐದು ವರ್ಷಗಳಿಂದ ಈರಪ್ಪನವರಿಗೆ ತಾನು ಸರ್ಕಾರಿ ದಾಖಲೆಗಳಲ್ಲಿ ‘ಮೃತ’ ವ್ಯಕ್ತಿ ಎಂಬ ವಿಷಯವೇ ತಿಳಿದಿರಲಿಲ್ಲ. ಈ ಎಡವಟ್ಟಿನಿಂದಾಗಿ ಅವರು ಸರ್ಕಾರದ ಹತ್ತಾರು ಸವಲತ್ತುಗಳಿಂದ ವಂಚಿತರಾಗಿದ್ದರು. ಮಾಧ್ಯಮಗಳಲ್ಲಿ ಈ ವರದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಪತ್ರಿಕಾ ವರದಿಗಳ ಆಧಾರದ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಈ ಗಂಭೀರ ಲೋಪಕ್ಕೆ ಕಾರಣರಾದ ನಾಲ್ವರು ಪ್ರಮುಖ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಪ್ರಕರಣ ದಾಖಲಿಸಿದ್ದು, ವಿಚಾರಣೆ ಚುರುಕುಗೊಳಿಸಿದ್ದಾರೆ. ಆರೋಪಿ ಅಧಿಕಾರಿಗಳ ಪಟ್ಟಿ ಹೀಗಿದೆ:
ನೀಲಾ ಮುರಗೋಡ – ಸುತಗಟ್ಟಿ ಗ್ರಾಮ ಆಡಳಿತಾಧಿಕಾರಿ.
ಆರ್.ಎಸ್.ಪಾಟೀಲ – ಮುರಗೋಡ ವೃತ್ತದ ಕಂದಾಯ ನಿರೀಕ್ಷಕ.
ಮಲ್ಲಿಕಾರ್ಜುನ ಹೆಗ್ಗನ್ನವರ – ಸವದತ್ತಿ ತಹಶೀಲ್ದಾರ್.
ಪ್ರವೀಣ ಜೈನ್ – ಬೈಲಹೊಂಗಲ ಉಪವಿಭಾಗಾಧಿಕಾರಿ.
ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಮರಣ ಪ್ರಮಾಣಪತ್ರ ನೀಡಿದ ಈ ಅಧಿಕಾರಿಗಳಿಗೆ ಲೋಕಾಯುಕ್ತ ತನಿಖೆಯ ಬಿಸಿ ತಟ್ಟಲಿದ್ದು, ರೈತನಿಗೆ ನ್ಯಾಯ ಸಿಗುವ ನಿರೀಕ್ಷೆಯಿದೆ.


