ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG 2024) ಅಕ್ರಮ ನಡೆದಿದ್ದು, ಈ ಹಿನ್ನೆಲೆ ಪರೀಕ್ಷೆಯನ್ನು ರದ್ದುಗೊಳಿಸಿ, ಮರು ಪರೀಕ್ಷೆಯ ಮಾಡುವ ಕುರಿತು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
2024ರ ನೀಟ್- ಯುಜಿ (NEET-UG) ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮರು ಪರೀಕ್ಷೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದ ಮೇ 5 ರಂದು ನಡೆಸಲಾಗಿದ್ದ ನೀಟ್ ಪರೀಕ್ಷೆಯನ್ನು ಅಮಾನ್ಯ ಎಂದು ಘೋಷಿಸಿ ಮರು ಪರೀಕ್ಷೆಗೆ ಆದೇಶ ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
ಹೊಸದಾಗಿ ಮತ್ತೆ ಪರೀಕ್ಷೆ ನಡೆಸುವುದು 20ಲಕ್ಷ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಕ್ರಮ ದೇಶವ್ಯಾಪಿ ನಡೆದಿಲ್ಲ. ಮರು ಪರೀಕ್ಷೆಗೆ ಆದೇಶಿಸಲು ಪೂರಕವಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಹೇಳಿದೆ.ಇಡೀ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ದೃಢವಾದರೆ ಮಾತ್ರ ಮರುಪರೀಕ್ಷೆ ನಡೆಸಬಹುದು ಎಂದು ತಿಳಿಸಿದರು.
ಈ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ. ಸಿಬಿಐ ನಮಗೆ ಹೇಳಿದ್ದನ್ನೆಲ್ಲ ಬಹಿರಂಗಪಡಿಸಿದರೆ, ಅದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಇನ್ನು ಮೂರು ದಿನಗಳ ಹಿಂದೆಯಷ್ಟೇ ನೀಟ್ ಪರೀಕ್ಷೆಗಳ ಫಲಿತಾಂಶಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ, ನಗರ ಮತ್ತು ಕೇಂದ್ರವಾರು ಪ್ರಕಟವಾಗಿತ್ತು. ನೀಟ್-ಯುಜಿ 2024 ಅಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪರೀಕ್ಷೆಗಳ ಫಲಿತಾಂಶ ಪ್ರಕಟಿಸುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿ(NTA)ಗೆ ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳ ಗುರುತು ಬಹಿರಂಗ ಪಡಿಸದಂತೆ ಖಡಕ್ ಸೂಚನೆ ನೀಡಿತ್ತು.