ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯಲ್ಲಿ ಇಂದು ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024 ಹಾಗೂ ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ಎರಡನೇ ತಿದ್ದುಪಡಿ ವಿಧೇಯಕ 2024 ಸರ್ವಾನುಮತದಿಂದ ಅಂಗೀಕಾರಗೊಂಡಿವೆ.
ವಿಪಕ್ಷಗಳ ವಿರೋಧದ ನಡುವೆಯೂ ಎರಡು ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ.
ಇನ್ನು ವಿಧಾನ ಪರಿಷತ್ನಲ್ಲೂ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024 ಅಂಗೀಕಾರಗೊಳ್ಳಲಿದ್ದು, ಇದಾದ ಬಳಿಕ ಕಾಯ್ದೆ ಜಾರಿಯಾದರೆ ಸಿನಿಮಾ ಪ್ರಿಯರಿಗೆ ದರ ಏರಿಕೆ ಬಿಸಿ ತಟ್ಟಲಿದೆ.
ಏನಿದು ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ 2024?
ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆಯಲ್ಲಿ ಸಿನಿಮಾ, ಸಾಂಸ್ಕೃತಿಕ ಕಲಾವಿದರ ಅನುಕೂಲಕ್ಕಾಗಿ ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್ಸ್ಕ್ರಿಪ್ಶನ್ ಶುಲ್ಕದ ಮೇಲೆ ಶೇಕಡ 1ರಿಂದ 2ರಷ್ಟು ಹೊಸ ಸೆಸ್ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದರಿಂದ ಸಿನಿಮಾ, ಸಾಂಸ್ಕೃತಿಕ ಕಲಾವಿದರಿಗೆ ಇಎಸ್ಐ, ಪಿಎಫ್ ಸೇರಿದಂತೆ ಅನೇಕ ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದೆ.
ರಾಜ್ಯದಲ್ಲಿನ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿ ಎಂಬ ನಿಧಿ ಸ್ಥಾಪಿಸಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದರಿಂದ ಸಿನಿಮಾ ಟಿಕೆಟ್ ಹಾಗೂ ಒಟಿಟಿ ಚಂದಾದಾರಿಕೆ ಮೇಲೆ ಶೇಕಡ 2 ಪರ್ಸೆಂಟ್ ಮೀರದಂತೆ ಶೇಕಡ 1 ಪರ್ಸೆಂಟ್ಗಿಂತ ಕಡಿಮೆಯಾಗದಂತೆ ಸೆಸ್ ವಿಧಿಸಲಿದೆ. ಈ ಸೆಸ್ ಅನ್ನು ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ & ಕಲ್ಯಾಣ ನಿಧಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದೆ.
ರಾಜ್ಯ ಸರ್ಕಾರದ ಈ ನಿರ್ಧಾರವನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿತ್ತು. ಎಲ್ಲದರ ಮೇಲೂ ತೆರಿಗೆಯನ್ನು ಹೇರಿರುವ ಸಿದ್ದರಾಮಯ್ಯ ಸರ್ಕಾರ, ಇದೀಗ ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ ಮಾಡಲು ‘ಕೈ’ ಎತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿತ್ತು. ಇದೀಗ ವಿಪಕ್ಷ ನಾಯಕರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ ಮಸೂದೆ ಅಂಗೀಕಾರಗೊಂಡಿದೆ.
ವಿಧಾನಮಂಡಲ ಅನರ್ಹತಾ ನಿವಾರಣಾ ಎರಡನೇ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ
ವಿಧಾನಸಭೆಯಲ್ಲಿ ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ಎರಡನೇ ತಿದ್ದುಪಡಿ ವಿಧೇಯಕ 2024 ಕೂಡ ಅಂಗೀಕಾರಗೊಂಡಿದೆ. ವಿಪಕ್ಷ ಶಾಸಕರ ವಿರೋಧದ ನಡುವೆಯೂ ಮಸೂದೆಗೆ ಅಂಗೀಕಾರ ಸಿಕ್ಕಿದೆ. ಸಿಎಂ ರಾಜಕೀಯ ಸಲಹೆಗಾರ, ಕಾನೂನು ಸಲಹೆಗಾರ ಹುದ್ದೆಗಳ ಅನರ್ಹತೆಗೆ ಕಡಿವಾಣ ಹಾಕುವ ವಿಧೇಯಕ ಇದಾಗಿದೆ.