ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣ ವಿಚಾರವಾಗಿ ಮೈಸೂರು ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದು, ನಿವೇಶನ ವಾಪಾಸ್ ಕೊಟ್ಟು ತನಿಖೆ ನಡೆಸಿ ಎಂದು ಸಿಎಂಗೆ ಸಲಹೆ ನೀಡಿದ್ದಾರೆ.
ನಿಮಗೆ ಬಂದಿರುವ ನಿವೇಶನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಾಪಾಸ್ ಕೊಟ್ಟು ತನಿಖೆ ಮಾಡಿಸಿ, ಸಿದ್ದರಾಮಯ್ಯರ 40 ವರ್ಷದ ರಾಜಕಾರಣವನ್ನು ಗಮನಿಸಿದರೆ ಅವರನ್ನು ಭ್ರಷ್ಟ ಅನ್ನಲು ಸಾಧ್ಯವಿಲ್ಲ. ಆದರೆ, ಈಗ ಸಿದ್ದರಾಮಯ್ಯ ಬಗ್ಗೆ ಅನುಮಾನ ಶುರುವಾಗಿದೆ. ಸೈಟ್ ವಾಪಾಸ್ ಕೊಟ್ಟು ತನಿಖೆ ಮಾಡಿಸುವುದೇ ಸೂಕ್ತ. 40 ವರ್ಷಗಳಲ್ಲಿ ಕಳಂಕ ಅಂಟಿಸಿ ಕೊಳ್ಳದಿರುವ ನೀವು ಇದ್ಯಾವುದೋ 16 ಸೈಟಿಗೆ ಕಳಂಕ ಅಂಟಿಸಿಕೊಳ್ಳುತ್ತಾ ಇದ್ದೀರಿ. ಇದು ಬೇಕಾ ನಿಮಗೆ? ಮುಂದಿನ ಮೂರುವರೆ ವರ್ಷ ನೀವೇ ಸಿಎಂ ಆಗಿ ಇರುತ್ತೀರಿ. ಇಡೀ ಮೂರೂವರೆ ವರ್ಷ ಇದೇ ಆರೋಪಕ್ಕೆ ತುತ್ತಾಗುತ್ತೀರಿ. ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ ಎಂದರು.