ನಿರಂತರ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನಿಂದ ಬರುತ್ತಿದೆ ಜೀವ ಬೆದರಿಕೆ ಕರೆ: ನಟ ಸಲ್ಮಾನ್‌ ಖಾನ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಳೆದ ಕೆಲವು ವರ್ಷಗಳಿಂದ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನಿಂದ ನಿರಂತರ ಜೀವ ಬೆದರಿಕೆ ಕರೆ ಬರುತ್ತಿವೆ ಎಂದು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ಸಲ್ಲು ಮನೆ ಮೇಲೆ ಗುಂಡು ಹಾರಿಸಿದ್ದರು. ಆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಮಾನ್​ ಖಾನ್​ ಇದೀಗ ಮಾತನಾಡಿದ್ದಾರೆ.

ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನನ್ನನ್ನು ಕೊಲ್ಲಲು ಸಕಲ ಪ್ರಯತ್ನವನ್ನೂ ನಡೆಸುಲ್ಲೇ ಇದೆ. ಗುಂಡಿನ ದಾಳಿ ಬಳಿ ನನ್ನ ಕುಟುಂಬಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಮುಂಬೈ ಕ್ರೈಂ ಬ್ರ್ಯಾಂಚ್‌ಗೆ ವಿಚಾರಣೆ ವೇಳೆ ಮಾಹಿತಿ ನೀಡಿದ ಸಲ್ಮಾನ್‌, ಅಂದು ನನಗೆ ಪಟಾಕಿಯಂತಹ ಸದ್ದು ಕೇಳಿಸಿತ್ತು. ಸುಮಾರು ಬೆಳಗ್ಗೆ 4.55 ಗಂಟೆ ಹೊತ್ತಿಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಬಾಲ್ಕನಿಯನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದರು. ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ಗುರಿಯಾಗಿಸಿ ಆ ದಾಳಿ ನಡೆದಿತ್ತು. ಲಾರೆನ್ಸ್‌ ಬಿಷ್ಣೋಯಿ ಈ ಕೃತ್ಯದ ಹೊಣೆ ಹೊತ್ತುಕೊಂಡಿರುವ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ಸಿಕ್ಕಿತ್ತು.ಈ ಹಿಂದೆ ಕೂಡ ಸಂದರ್ಶನವೊಂದರಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಗ್ಯಾಂಗ್ ಸದಸ್ಯರು ನನ್ನನ್ನು ಮತ್ತು ನನ್ನ ಸಂಬಂಧಿಕರನ್ನು ಕೊಲ್ಲುವ ಬಗ್ಗೆ ಮಾತನಾಡಿದ್ದ. ಹಾಗಾಗಿ, ಲಾರೆನ್ಸ್ ಬಿಷ್ಣೋಯ್ ತನ್ನ ಗ್ಯಾಂಗ್ ಸದಸ್ಯರ ಸಹಾಯದಿಂದ ನನ್ನ ಕುಟುಂಬ ಸದಸ್ಯರು ಒಳಗೆ ಮಲಗಿದ್ದಾಗ ಗುಂಡಿನ ದಾಳಿ ನಡೆಸಿ ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಕೊಲ್ಲಲು ಯೋಜಿಸಿ ದಾಳಿ ನಡೆಸಿದ್ದಾನೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಏನಿದು ಪ್ರಕರಣ?
ಎಪ್ರಿಲ್‌ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದು ದಾಳಿ ನಡೆಸಿದ್ದ ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳನ್ನು ಬಳಿಕ ಅರೆಸ್ಟ್‌ ಮಾಡಲಾಗಿತ್ತು. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದರು.

ಈ ಮಧ್ಯೆ ಗುಂಡಿನ ದಾಳಿ ನಡೆಸಿದ್ದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಅನೂಜ್‌ ಥಾಪನ್‌ ಕೆಲವು ದಿನಗಳ ಹಿಂದೆ ಪೊಲೀಸ್‌ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅನುಜ್ ಥಾಪನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆತನ ಕುಟುಂಬ ಇದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಲಾಕಪ್‌ನಲ್ಲಿ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರೆ ಆತನ ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!