ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳ ಕುರಿತು ಲೋಕಸಭೆಯಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಾತನಾಡಿದ್ದಾರೆ.
ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಕೇಳಿದ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಕ್ರಿಯ ಭಯೋತ್ಪಾದಕರನ್ನು ಜೈಲಿಗೆ ಅಥವಾ ಜಹನ್ನಮ್ (ನರಕ)ಕ್ಕೆ ಕಳುಹಿಸಲಾಗುವುದು ಎಂದು ಖಡಕ್ ಆಗಿ ಉತ್ತರ ನೀಡಿದರು.
ಭಯೋತ್ಪಾದಕರು ಯಶಸ್ವಿಯಾಗುವುದಿಲ್ಲ. ಅವರ ಚಟುವಟಿಕೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ. ನರೇಂದ್ರ ಮೋದಿ ಸರ್ಕಾರ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ನಿತ್ಯಾನಂದ ರಾಯ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪಡೆಗಳು 28 ಭಯೋತ್ಪಾದಕರನ್ನು ಹತ್ಯೆ ಮಾಡಿವೆ. ಮೋದಿ ಸರ್ಕಾರವು ಉಗ್ರರ ಕುರಿತು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ನಾವು ಭಯೋತ್ಪಾದನೆಯನ್ನು ಕೊನೆಗೊಳಿಸುತ್ತೇವೆ. ಅವರು (ಭಯೋತ್ಪಾದಕರು) ಜೈಲಿನಲ್ಲಿರುತ್ತಾರೆ ಅಥವಾ ಜಹನ್ನುಮ್ ಗೆ ಹೋಗುತ್ತಾರೆ ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ ಎಂದು ರಾಯ್ ಹೇಳಿದ್ದಾರೆ.
ಯುಪಿಎ ಆಡಳಿತದಲ್ಲಿ ಭಯೋತ್ಪಾದನೆಯ ಘಟನೆಗಳು 7,217 ದಾಖಲಾಗಿತ್ತು. ಇದೀಗ ಈ ವರ್ಷದ ಜುಲೈನಲ್ಲಿ 2259 ಕ್ಕೆ ಇಳಿದಿದೆ. ಇವುಗಳು ನಡೆಯಬಾರದಿತ್ತು. ಇದು ದುರದೃಷ್ಟಕರ ಆದರೆ ಅವರು (ಪ್ರತಿಪಕ್ಷಗಳು) ಅದರ ಮೇಲೆ ರಾಜಕೀಯ ಮಾಡಬಾರದು ಎಂದು ಸಚಿವರು ಹೇಳಿದ್ದಾರೆ.
2004 ರಿಂದ 2014 ರ ನಡುವೆ 2,829 ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ . ಈ ಸಂಖ್ಯೆ 2014 ರಿಂದ 67 ರಷ್ಟು ಕಡಿಮೆಯಾಗಿದೆ. ಭಯೋತ್ಪಾದಕ ಘಟನೆಗಳಲ್ಲಿ 69 ರಷ್ಟು ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 28 ಉಗ್ರರನ್ನು ಹತ್ಯೆ ಮಾಡಲಾಗಿದೆ. ವಿಷಾದದ ಸಂಗತಿಯೆಂದರೆ, ನಮ್ಮ ಕೆಲವು ಸೈನಿಕರು ಸಹ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.
2023 ರಲ್ಲಿ, 2 ಕೋಟಿ 11 ಸಾವಿರ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲಾಗಿದೆ, ಇದರಿಂದಾಗಿ ಪ್ರವಾಸಿಗರು ಹೆಚ್ಚಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಜನವರಿಯಿಂದ ಜೂನ್ 2024 ರ ನಡುವೆ ಜಮ್ಮು ಕಾಶ್ಮೀರಕ್ಕೆ ಒಟ್ಟು 1,08,41,009 ಪ್ರವಾಸಿಗರು ಮತ್ತು 2023 ರಲ್ಲಿ 2,11,24,674 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಇದುವರೆಗಿನ ಸಾರ್ವಕಾಲಿಕ ಗರಿಷ್ಠ . 2022 ರಲ್ಲಿ 1,88,64,332 , 2021 ರಲ್ಲಿ 1,13,14,884 ಮತ್ತು 2020 ರಲ್ಲಿ 34,70,834 ಪ್ರವಾಸಿಗರು ಭೇಟಿ ನೀಡಿದ್ದಾರೆ.