ಹೊಸದಿಗಂತ ವರದಿ,ತುಮಕೂರು:
ಬಿಟ್ ಕಾಯಿನ್ ಹಗರಣದಲ್ಲಿ ಬಂಧನವಾಗಿದ್ದ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಖಂಡೇಲ್ ವಾಲಾ, ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ಬಿಟ್ ಕಾಯಿನ್ ಹಗರಣ ಸಂಬಂಧ ತುಮಕೂರು ತಿಲಕ್‌ಪಾರ್ಕ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಇದೀಗ ಇಬ್ಬರು ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ.
ಶ್ರೀಕಿ ಮತ್ತು ರಾಬಿನ್ ಖಂಡೇಲ್ ವಾಲಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ತುಮಕೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಆರೋಪಿಗಳಿಗೆ ಜಾಮೀನು ನೀಡಿದೆ. ಹೀಗಾಗಿ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪ್ರಕರಣದ ಒಂದನೇ ಆರೋಪಿ ಶ್ರೀಕಿ 50 ಸಾವಿರ ಮೊತ್ತದ ಬಾಂಡ್ ಹಾಗೂ ಒಬ್ಬರ ಭದ್ರತೆ ನೀಡಬೇಕು ಮತ್ತು ಎರಡನೇ ಆರೋಪಿ ರಾಬಿನ್ ಖಂಡೇಲ್‌ವಾಲಾ 25 ಸಾವಿರ ಮೊತ್ತದ ನಗದು ಭದ್ರತೆ ಸೇರಿ ಇತರೆ ಷರತ್ತುಗಳನ್ನು ವಿಧಿಸಲಾಗಿದೆ.
ಸರ್ಕಾರ ತಮ್ಮ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ) ಕಾಯ್ದೆ–2000 ಅನ್ನು ಅನ್ವಯಿಸಿತ್ತು. ಇತ್ತೀಚೆಗಷ್ಟೇ ಹೈಕೋರ್ಟ್, ಕೋಕಾ ಕಾಯ್ದೆ ಹೇರಿದ್ದ ಆದೇಶವನ್ನು ರದ್ದುಪಡಿಸಿದೆ. ಹೀಗಾಗಿ ಪ್ರಕರಣದ ತನಿಖೆ ನಡೆಸಿರುವ, ವಿಶೇಷ ತನಿಖಾ ತಂಡ (ಎಸ್ಐಟಿ) 60 ದಿನಗಳ ಒಳಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಆದರೆ, 60 ದಿನ ಕಳೆದರೂ ಯಾವುದೇ (ಪ್ರಾಥಮಿಕ ಅಥವಾ ಅಂತಿಮ ವರದಿ) ಆರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ನಾವು ಕಾನೂನು ಬದ್ಧ ಜಾಮೀನು ಪಡೆಯಲು ಅರ್ಹರಾಗಿದ್ದು ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು.
ಬಹುಕೋಟಿ ಮೌಲ್ಯದ ಬಿಟ್ ಕಾಯಿನ್ ಕಳವು ಮಾಡಿ ಅವುಗಳನ್ನು ಪಶ್ಚಿಮ ಬಂಗಾಳದ ತನ್ನ ಸಹಚರ ರಾಬಿನ್ ಖಂಡೇಲ್ ವಾಲಾಗೆ ವರ್ಗಾವಣೆ ಮಾಡಿದ ಆರೋಪ ಶ್ರೀಕಿ ಮೇಲಿದೆ.
ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.