ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೋರಮಂಗಲ ಪಿಜಿ ಮರ್ಡರ್ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೃತಿ ಕುಮಾರಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸ್ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ನಿನ್ನೆಯಿಂದ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳಿಗೆ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎನ್ನಲಾಗಿದೆ.
ಕೃತಿ ಕುಮಾರಿಯನ್ನ ಕೊಲೆ ಮಾಡಿದ ಆರೋಪಿ ಭೋಪಾಲ್ ಮೂಲದ ಅಭಿಷೇಕ್. ಅಭಿಷೇಕ್ ಹಾಗೂ ಕೃತಿ ಕುಮಾರಿಯ ಸ್ನೇಹಿತೆ ಪರಸ್ಪರ ಪ್ರೀತಿಸುತ್ತಿದ್ದರು. ಕೃತಿ ಕುಮಾರಿ ಹಾಗೂ ಅಭಿಷೇಕ್ನ ಪ್ರಿಯತಮೆ ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಒಂದೇ ಪಿಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ. ಅಭಿಷೇಕ್ ಯಾವ ಕೆಲಸಕ್ಕೂ ಹೋಗದ ಕಾರಣ ಆತನ ಗರ್ಲ್‌ಫ್ರೆಂಡ್ ಕೆಲಸಕ್ಕೆ ಹೋಗುವಂತೆ ಪೀಡಿಸಿದ್ದಳು. ಕಡೆಗೂ ಅವನು ಆಕೆಯ ಒತ್ತಾಯದ ಮೇರೆಗೆ ಕೆಲಸಕ್ಕೆ ಹೋಗಿದ್ದಾನೆ. ಆದರೆ ಕೆಲವೇ ದಿನಗಳಲ್ಲಿ ಕೆಲಸ ಬಿಟ್ಟಿದ್ದಾನೆ.
ಇದರಿಂದ ಆತನ ಗರ್ಲ್‌ಫ್ರೆಂಡ್‌ಗೆ ಕೋಪ ಬಂದಿತ್ತು. ಆತನ ಜೊತೆ ಸಂಬಂಧ ಕಡಿದುಕೊಳ್ಳುವ ಯೋಚನೆ ಮಾಡಿದ್ದಳು ಎನ್ನಲಾಗಿದೆ. ಈ ಕೋಪಕ್ಕೆ ಆತ ಪದೇ ಪದೆ ಪಿಜಿಗೆ ಬಂದು ಕುಡಿದು ಗಲಾಟೆ ಮಾಡಿದ್ದ. ಈ ಎಲ್ಲವನ್ನೂ ನೋಡಿ ಕೃತಿ ಆಕೆಯ ಸ್ನೇಹಿತೆಯನ್ನು ಬೇರೊಂದು ಪಿಜಿಗೆ ಕಳಿಸಿದ್ದಳು. ಆಕೆಯೇ ತನ್ನ ಗರ್ಲ್‌ಫ್ರೆಂಡ್ ಮೈಂಡ್‌ವಾಶ್ ಮಾಡಿದ್ದಾಳೆ ಎಂದು ಅಭಿಷೇಕ್ ಕೃತಿ ಬಗ್ಗೆ ದ್ವೇಷ ಹೊಂದಿದ್ದ ಎನ್ನಲಾಗಿದೆ. ಈ ಕಾರಣದಿಂದ ಆತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೃತಿ ರೂಮಿನ ಬಾಗಿಲು ತೆಗೆಯುತ್ತಿದ್ದಂತೆಯೇ ಆತ ಏಕಾಏಕಿ ಕತ್ತು ಕುಯ್ದು ಓಡಿಹೋಗಿದ್ದಾನೆ.