ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ, ಹಿಂಸಾಚಾರ, ಅಪಮಾನ ಮಾಡುವುದು ಮತ್ತು ಆಸ್ಪತ್ರೆಗೆ ಹಾನಿ ಮಾಡಿವವರಿಗೆ 3ರಿಂದ 7 ವರ್ಷಗಳ ವರೆಗೆ ಶಿಕ್ಷೆ ವಿಧಿಸಲಾಗುವುದು.
ವೈದ್ಯಕೀಯ ವೃತ್ತಿ ಪಾಲಿಸುವವರಿಗೆ ನೋಂದಣಿ ಕಡ್ಡಾಯ ಮಾಡುವ ಮಹತ್ವದ ಮಸೂದೆಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಂಡಿಸಿದ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ಮಸೂದೆಯನ್ನು ಧ್ವನಿಮತದ ಮೂಲಕ ಸದನ ಅಂಗೀಕರಿಸಿದೆ.
ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ಹೊರತುಪಡಿಸಿ ಇತರೆ ಸದಸ್ಯರು, ನಾಮನಿರ್ದೇಶಿತರ ಅವಧಿಯನ್ನು 5 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಎರಡು ಅವಧಿಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷರಾಗಿದ್ದವರು ಮತ್ತೆ ಅದೇ ಸ್ಥಾನಕ್ಕೆ ಚುನಾಯಿತರಾಗಲು ಅವಕಾಶವಿಲ್ಲ. ಪರಿಷತ್ತಿಗೆ ಮೂರು ವರ್ಷಗಳ ಅವಧಿಗೆ ಒಬ್ಬ ರಿಜಿಸ್ಟ್ರಾರ್ ಮತ್ತು ಉಪ ರಿಜಿಸ್ಟ್ರಾರ್ ನೇಮಕ ಮಾಡಲಾಗುತ್ತದೆ. ಪರಿಷತ್ತಿನಲ್ಲಿ ನೋಂದಣಿಯಾಗದವರು ವೈದ್ಯ ವೃತ್ತಿ ನಿರ್ವಹಿಸುವಂತಿಲ್ಲ. ನಕಲಿ ವೈದ್ಯರ ವಿರುದ್ಧ ಪರಿಷತ್ ಸ್ವಯಂಪ್ರೇರಣೆಯಿಂದ ದೂರು ಸಲ್ಲಿಸಬಹುದಾಗಿದೆ. ನಕಲಿ ವೈದ್ಯರಿಗೆ 1 ಲಕ್ಷ ರೂ. ಜುಲ್ಮಾನೆ ವಿಧಿಸಲಾಗುವುದು.