ಹೊಸದಿಗಂತ ಅಂಕೋಲಾ:
ತಾಲೂಕಿನಲ್ಲಿ ಗುರುವಾರ ಸಂಜೆಯಿಂದ ಶುಕ್ರವಾರ ಬೆಳಿಗ್ಗಿನ ಜಾವದ ವರೆಗೆ ಆಗಾಗ ಬೀಸಿದ ಬಿರುಗಾಳಿಯಿಂದಾಗಿ ಬಹಳಷ್ಟು ಕಡೆಗಳಲ್ಲಿ ಮರಗಳು ಮುರಿದು ಬಿದ್ದು ಹಾನಿ ಸಂಭವಿಸಿದೆ.
ಗಾಳಿಯಿಂದಾಗಿ ಹಲವಾರು ಕಡೆಗಳಲ್ಲಿ ಮರಗಳು ಬುಡ ಸಮೇತ ಕಿತ್ತು ಬಿದ್ದಿದ್ದು ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ರಾತ್ರಿಯಿಡಿ ಅತಿ ವೇಗದಲ್ಲಿ ಬಿರುಗಾಳಿ ಬೀಸಿದ್ದು ಸಂಜೆಯಿಂದ ಬೆಳಗಿನ ಜಾವದ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೆಸ್ಕಾಂ ಸಿಬ್ಬಂದಿಗಳು ಆಗಾಗ ಸುರಿಯುತ್ತಿರುವ ಮಳೆ ಮತ್ತು ಬಿರುಗಾಳಿಯ ನಡುವೆಯೂ ರಾತ್ರಿಯಿಡಿ ವಿದ್ಯುತ್ ತಂತಿಗಳ ಮೇಲೆ ಬಿದ್ದ ಮರಗಳ ತೆರುವು ಮತ್ತು ದುರುಸ್ಥಿ ಕಾರ್ಯವನ್ನು ನಡೆಸಿ ಪಟ್ಟಣದ ಸುತ್ತ ಮುತ್ತಲಿನ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಮಾಡಲು ಶ್ರಮಿಸಿದ್ದು ಈ ಕುರಿತು ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ವೇಗದ ಗಾಳಿಯಿಂದಾಗಿ ಕಡಲ ತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು ಭಾರೀ ಗಾತ್ರದ ಅಲೆಗಳು ಬಂಡೆಗಳಿಗೆ ಅಪ್ಪಳಿಸುವ ಶಬ್ದದಿಂದಾಗಿ ಕಡಲ ತೀರದ ನಿವಾಸಿಗಳು ಭಯದಿಂದಲೇ ರಾತ್ರಿ ಕಳೆಯುವಂತಾಗಿದೆ.
ಶುಕ್ರವಾರ ಬೆಳಿಗ್ಗೆ ಸಹ ಗಾಳಿ ಮಳೆ ಮುಂದುವರಿದಿದೆ.