ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್‌ಗೆ ಬರಾಕ್‌ ಒಬಾಮಾ ಬೆಂಬಲ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅವರು ಚುನಾವಣೆ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆ, ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರೇ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಕಮಲಾ ಹ್ಯಾರಿಸ್‌ಗೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಹಾಗೂ ಅವರ ಪತ್ನಿ ಮಿಚೆಲ್‌ ಒಬಾಮಾ ಅವರು ಬೆಂಬಲ ಸೂಚಿಸಿದ್ದಾರೆ.

ಚುನಾವಣೆ ರೇಸ್‌ನಿಂದ ಹಿಂದೆ ಸರಿದ ಬಳಿಕ ಜೋ ಬೈಡೆನ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್‌ ಅವರ ಹೆಸರನ್ನು ಸೂಚಿಸಿದ್ದರು. ಆದರೆ, ಬರಾಕ್‌ ಒಬಾಮಾ ಅವರು ಕಮಲಾ ಹ್ಯಾರಿಸ್‌ ಅವರಿಗೆ ಬೆಂಬಲ ಸೂಚಿಸುತ್ತಾರೋ, ಇಲ್ಲವೋ ಎಂಬ ಗೊಂದಲ ಮನೆಮಾಡಿತ್ತು. ಈಗ ಬರಾಕ್‌ ಒಬಾಮಾ ಅವರು ಕೂಡ ಕಮಲಾ ಹ್ಯಾರಿಸ್‌ ಅವರಿಗೆ ಬೆಂಬಲ ಘೋಷಿಸಿದ್ದು,ಕಮಲಾ ಹ್ಯಾರಿಸ್‌ ಅವರೇ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತವಾಗಿದೆ.

ಬರಾಕ್‌ ಒಬಾಮಾ ಹಾಗೂ ಅವರ ಪತ್ನಿ ಮಿಚೆಲ್‌ ಒಬಾಮಾ ಅವರು ಕಮಲಾ ಹ್ಯಾರಿಸ್‌ ಅವರಿಗೆ ಕರೆ ಮಾಡಿ, ಬೆಂಬಲ ಘೋಷಿಸಿದ್ದಾರೆ. ‘ಕೆಲ ದಿನಗಳ ಹಿಂದೆ ನಾನು ಹಾಗೂ ಮಿಚೆಲ್‌ ಅವರು ಗೆಳತಿ ಕಮಲಾ ಹ್ಯಾರಿಸ್‌ ಅವರಿಗೆ ಕರೆ ಮಾಡಿದ್ದೆವು. ನೀವು ಅಮೆರಿಕ ಅಧ್ಯಕ್ಷರಾದರೆ ಒಳ್ಳೆಯದಾಗುತ್ತದೆ. ನಿಮಗೆ ನಮ್ಮ ಬೆಂಬಲವಿದೆ ಎಂಬುದನ್ನು ತಿಳಿಸಿದೆವು. ದೇಶವು ಮಹತ್ವದ ಘಟ್ಟದಲ್ಲಿರುವ ಇಂತಹ ಹೊತ್ತಿನಲ್ಲಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಲು ನಾವು ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುತ್ತೇವೆ. ನೀವು ಕೂಡ ನಮ್ಮ ಜತೆಗೂಡಿ’ ಎಂಬುದಾಗಿ ಬರಾಕ್‌ ಒಬಾಮಾ ಪೋಸ್ಟ್‌ ಮಾಡಿದ್ದಾರೆ.

ಕಮಲಾ ಹ್ಯಾರಿಸ್​ ಮೂಲತಃ ಭಾರತದವರು. ಅವರ ತಾಯಿ ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಬಳಿಕ ಯುಎಸ್​ಗೆ ತೆರಳಿ, ಅಲ್ಲಿನವರನ್ನೇ ಮದುವೆಯಾಗಿ ನೆಲೆಸಿದ್ದರು. ಯುಎಸ್​ ಉಪಾಧ್ಯಕ್ಷೆ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೂ ಕಮಲಾ ಹ್ಯಾರಿಸ್​ ಪಾತ್ರರಾಗಿದ್ದಾರೆ. ಅವರು ಯುಎಸ್​ ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದಾಗ ಚೆನ್ನೈನಲ್ಲಿರುವ ಅವರ ಪೂರ್ವಜರ ಊರಿನಲ್ಲಿ ಭರ್ಜರಿ ಸಂಭ್ರಮ ಏರ್ಪಟ್ಟಿತ್ತು. ಸಿಹಿ ವಿತರಣೆಯೂ ನಡೆದಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!