ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಬೆಳಗ್ಗೆ ನಡೆದಿದ್ದ 10 ಮೀ. ಏರ್ ರೈಫಲ್ ಮಿಶ್ರ ತಂಡ ಸೋಲು ಕಂಡ ಬೆನ್ನಲ್ಲೇ ಇದೀಗ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತೀಯ ಶೂಟರ್ಗಳಾದ ಸರಬ್ಜೋತ್ ಸಿಂಗ್(9ನೇ) ಮತ್ತು ಅರ್ಜುನ್ ಸಿಂಗ್ ಚಿಮಾ(18) ಅಗ್ರ 8ರೊಳಗೆ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಸರಬ್ಜೋತ್ ಸಿಂಗ್ ಒಟ್ಟು ಆರು ಸುತ್ತಿನ ಪಂದ್ಯದಲ್ಲಿ 577 ಅಂಕ ಗಳಿಸಿ 9ನೇ ಸ್ಥಾನ ಪಡೆದರೆ, ಅರ್ಜುನ್ ಸಿಂಗ್ 574 ಅಂಕ ಗಳಿಸಿದರು. ಸರಬ್ಜೋತ್ ಸಿಂಗ್ ನಾಲ್ಕನೇ ಸುತ್ತಿನಲ್ಲಿ 100ಕ್ಕೆ 100 ಅಂಕ ಗಳಿಸಿ ಮೂರನೇ ಸ್ಥಾನಕ್ಕೇರಿದ್ದರು. ಈ ವೇಳೆ ಅವರು ಫೈನಲ್ ಪ್ರವೇಶ ಪಡೆಯುವುದು ಖಚಿತ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ಬಳಿಕದ ಪ್ರಧಾನ 2 ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿ 9ನೇ ಸ್ಥಾನ ಪಡೆದು ಕೂದಲೆಳೆ ಅಂತರದಲ್ಲಿ ಫೈನಲ್ಗೆರುವ ಅರ್ಹತೆಯಿಂದ ವಂಚಿತರಾದರು. ಅಗ್ರ 8 ಸ್ಥಾನ ಪಡೆದ ಶೂಟರ್ಗಳು ನೇರವಾಗಿ ಫೈನಲ್ಗೆ ಲಗ್ಗೆಯಿಟ್ಟರು.
ಇದಕ್ಕೂ ಮುನ್ನ ನಡೆದಿದ್ದ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತ ಸೋಲು ಕಂಡು ಪದಕ ಸುತ್ತಿಗೇರುವಲ್ಲಿ ವಿಫಲವಾಗಿತ್ತು. ಸಂದೀಪ್ ಸಿಂಗ್-ಇಲವೆನಿಲ್ ವಲರಿವನ್ ಜೋಡಿ 12ನೇ ಸ್ಥಾನ ಪಡೆದರೆ, ಅರ್ಜುನ್ ಬಬುಟ-ರಮಿತಾ ಜಿಂದಾಲ್ ಜೋಡಿ 6ನೇ ಸ್ಥಾನ ಪಡೆಯಿತು. ಈ ಜೋಡಿ ಒಟ್ಟು 628.7 ಅಂಕಗಳಿಸಿದರೆ, ಸಂದೀಪ್ ಸಿಂಗ್-ಇಲವೆನಿಲ್ ಜೋಡಿ 626.3 ಅಂಕ ಗಳಿಸಿತು. ಇದರೊಂದಿಗೆ 10 ಮೀ. ಏರ್ ರೈಫಲ್ ಮಿಶ್ರ ಸ್ಪರ್ಧೆಯಲ್ಲಿ ಭಾರತದ ಎರಡೂ ತಂಡಗಳು ಕೂಡ ಪದಕ ಸುತ್ತಿಗೇರುವಲ್ಲಿ ವಿಫಲವಾಯಿತು. ಚೀನಾ, ಕೊರಿಯಾ, ಜರ್ಮನಿ ಮತ್ತು ಕಝಾಕಿಸ್ತಾನ್ ಪದಕ ಸುತ್ತಿಗೆ ಪ್ರವೇಶಿಸಿತು.