ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರ ಜಡೆಯನ್ನು ಕತ್ತರಿಸಿದ ಘಟನೆ ನಡೆದಿದೆ.
ಮಕ್ಕಳ ಜಡೆ ಕತ್ತರಿಸಿದ ವಿಚಾರ ತಿಳಿದು ಶಾಲೆಗೆ ಆಗಮಿಸಿದ ಪೋಷಕರು ಗಲಾಟೆ ನಡೆಸಿ ಶಿಕ್ಷಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಲೆಗೆ ಬರುವಾಗ ಎರಡು ಜಡೆಗಳನ್ನು ಹಾಕಿಲ್ಲ ಎಂಬ ಕಾರಣಕ್ಕೆ ಶಾಲಾ ಶಿಕ್ಷಕರು ಎಂಟನೇ ತರಗತಿಯಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರ ಜಡೆಗಳನ್ನು ಕತ್ತರಿಸಿದ್ದಾರೆ.
ಮನೆಗೆ ತೆರಳಿದ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ತರಗತಿಯಲ್ಲಿ ನಡೆದ ಘಟನೆ ವಿವರಿಸಿದಾಗ ಸಿಟ್ಟಿಗೆದ್ದ ಪೋಷಕಕರು ಇಂದು ಬೆಳಗ್ಗೆ ಶಾಲೆಗೆ ಆಗಮಿಸಿ ಶಾಲೆಯ ಮುಖ್ಯ ಶಿಕ್ಷಕರನ್ನು ಹಾಗೂ ಕೂದಲು ಕತ್ತರಿಸಿದ ದೈಹಿಕ ಶಿಕ್ಷಕ ಶಿವಕುಮಾರ್, ಸಹಶಿಕ್ಷಕಿ ಪವಿತ್ರಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಿಷಯ ತಿಳಿದು ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.