ಶಿರೂರು ಗುಡ್ಡ ಕುಸಿತಕ್ಕೆ ಕೇಂದ್ರ ಸರ್ಕಾರ ನೇರ ಹೊಣೆ: ಸಚಿವ ಮಂಕಾಳ ವೈದ್ಯ ಆರೋಪ

ಹೊಸ ದಿಗಂತ ವರದಿ, ಮಂಗಳೂರು:

ಅಂಕೋಲಾದ ಶಿರೂರು ಬಳಿ ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿತ ದುರಂತ ಸಂಭವಿಸಿದ್ದು, ಐಡಿಯಲ್ ರೋಡ್ ಬಿಲ್ಡರ್ಸ್ (ಐಆರ್‌ಬಿ) ಮತ್ತು ಕೇಂದ್ರ ಸರ್ಕಾರ ನೇರ ಹೊಣೆ ಎಂದು ರಾಜ್ಯ ಮೀನುಗಾರಿಕೆ, ಒಳನಾಡು ಜಲ ಸಾರಿಗೆ ಮತ್ತು ಬಂದರು ಖಾತೆ ಸಚಿವ ಮಂಕಾಳ ವೈದ್ಯ ಆಪಾದಿಸಿದರು.

ಮಂಗಳೂರು ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಜು.೧೧ ರಂದು ಗುಡ್ಡ ಕುಸಿತ ದುರಂತ ಸಂಭವಿಸಿದೆ. ಅಂದಿನಿಂದ ನಾನು ಅಲ್ಲೇ ಇದ್ದೇನೆ. ವಿಧಾನಮಂಡಲ ಅವೇಶನವನ್ನು ಬಿಟ್ಟು ನಾನು ಮತ್ತು ಶಾಸಕ ಸತೀಶ್ ಸೈಲ್ ಅಲ್ಲೇ ಇದ್ದೆವು. ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದೇವೆ. ಕಳೆದ ೧೧ ವರ್ಷದಿಂದ ಐಆರ್‌ಬಿ ಕಾಮಗಾರಿ ನಡೆಸುತ್ತಿದ್ದು, ಇನ್ನೂ ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಅವರಲ್ಲಿ ಒಂದು ಹಿಟಾಚಿ ಕೂಡ ಇಲ್ಲ. ಅದನ್ನು ಕೂಡ ನಾವು ಬೇರೆ ಕಡೆಯಿಂದ ತರಿಸಿದ್ದೇವೆ ಎಂದು ಹೇಳಿದರು.

ಕೇಂದ್ರ ತಂಡ ಇಂಥದ್ದೇ ಜಾಗದಲ್ಲಿ ಕುಸಿಯುತ್ತದೆ ಎಂದು ಹೇಳಿದ್ದರೂ ಏನೂ ಮಾಡಲಾಗಲಿಲ್ಲ. ಬೇರೆ ರಾಜ್ಯದವರೂ ಸಾವಿಗೀಡಾಗಿದ್ದಾರೆ. ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಾವು ನ್ಯಾಯವಾಗಿ ಅಲ್ಲಿ ಇದ್ದೇವೆ. ಈಗ ಆಗಬಾರದ್ದು ಆಗಿಹೋಗಿದೆ. ಯಾರೂ ಯೋಚನೆ ಮಾಡದ ರೀತಿಯಲ್ಲಿ ಗುಡ್ಡ ಕುಸಿತವಾಗಿದೆ ಎಂದು ಅವರು ವಿಷಾದಿಸಿದರು.

ಕೇರಳದ ಲಾರಿ ಹೊಳೆಯಲ್ಲಿ ಇರುವುದು ಗೊತ್ತಾಗಿದೆ. ಅದನ್ನು ನೋಡಲು ತೆರಳಲು ಸಾಧ್ಯವಾಗುತ್ತಿಲ್ಲ. ನೌಕಾಸೇನೆ, ಕೋಸ್ಟ್‌ಗಾರ್ಡ್ ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದರು.

ಸಂತ್ರಸ್ತರ ಕುಟುಂಬಕ್ಕೆ ಏನಾದರೂ ಸಹಾಯ ಮಾಡುವುದಿದ್ದರೆ ಮಾಡಬಹುದು. ಇಲ್ಲಿವರೆಗೆ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ನಿಖರ ಮಾಹಿತಿ ಯಾರಿಗೂ ಇಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುವುದು ಸರಿಯಲ್ಲ. ಮೃತರ ಕುಟುಂಬಕ್ಕೆ ತಲಾ ೫ ಲಕ್ಷ ರೂ. ಪರಿಹಾರ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ ೧.೨೫ ಲಕ್ಷ ರೂ. ನೆರವು ನೀಡಿದ್ದೇವೆ. ಮನೆ ಶುಚಿ ಮಾಡಲು ೫ ಸಾವಿರ ರೂ. ನೀಡಲಾಗಿದೆ. ಮಳೆ ಕಡಿಮೆಯಾದರೆ ತ್ವರಿತ ಕಾರ್ಯಾಚರಣೆ ನಡೆಸಲು ಅನುಕೂಲವಾಗಲಿದೆ. ಗುಡ್ಡದಿಂದ ನೀರು ಬಂದು ನದಿ ತುಂಬಿ ಹರಿಯುತ್ತಿದೆ. ಹಾಗಾಗಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಗುಡ್ಡ ಕುಸಿತ ದುರಂತಕ್ಕೆ ಸಂಬಂಸಿ ಐಆರ್‌ಬಿ ಕಂಪನಿ ಮೇಲೆ ಕೇಸು ದಾಖಲಿಸಲಾಗಿದೆ. ಅರಣ್ಯ ಇಲಾಖೆಯಿಂದಲೂ ಕೇಸು ದಾಖಲಿಸಲಾಗಿದೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ತನಿಖೆಗೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಏನೇ ಮಾಡಿದರೂ ಈ ಕಂಪೆನಿ ಮೂಲ ಬಿಜೆಪಿಯಾಗಿದ್ದು, ಅದನ್ನು ಹೊರತುಪಡಿಸಿ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ ಎಂದರು.

ಮುಖ್ಯಮಂತ್ರಿ, ಕಂದಾಯ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಾವು ರಾಜಕಾರಣ ಮಾಡುವುದಿಲ್ಲ, ಬಡವರಿಗೆ ಸಹಾಯ ಮಾಡುತ್ತೇವೆ. ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಗ್ಗೆ ಮಾತನಾಡಲು ಸಾಕಷ್ಟಿದೆ. ಅದೇ ಕ್ಷೇತ್ರದಲ್ಲಿ ೧೫ ವರ್ಷ ಶಾಸಕರಾಗಿ, ಮಂತ್ರಿಗಳೂ ಆಗಿದ್ದವರು, ಅವರಿಗೆ ಎನ್‌ಎಚ್‌ಎಐ, ಐಆರ್‌ಬಿ ಯಾರಿಗೆ ಬರುತ್ತದೆ ಎನ್ನುವುದು ಗೊತ್ತಿಲ್ಲವೇ? ಬಿಜೆಪಿಯವರು ಯಾರು ಸಾಯುತ್ತಾರೆ ಎಂದು ನೋಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಹಾಗೆ ಮಾಡುವುದು ತಪ್ಪು.
ಶವದ ಮೇಲೆ ರಾಜಕಾರಣ ಮಾಡುವುದು ಎಂದಿಗೂ ಒಳ್ಳೆಯದಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!