ಹೊಸ ದಿಗಂತ ವರದಿ, ಶ್ರೀರಂಗಪಟ್ಟಣ :
ರಾಜ್ಯದಲ್ಲಿ ವಾಡಿಕೆಗಿಂತ ಶೇ. 28 ರಷ್ಟು ಹೆಚ್ಚು ಮಳೆಯಾಗಿದ್ದು, ಬಹುತೇಕ ರಾಜ್ಯದ ಜಲಾಶಯಗಳು ಭರ್ತಿಯಾಗಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಪಟ್ಟಣದ ವೆಲ್ಲೆಸ್ಲಿ ಸೇತುವೆ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ, ಆದರೆ ರಾಜ್ಯದಲ್ಲಿ 6 ಜಿಲ್ಲೆಗಳಲ್ಲಿ ವಾಡಿಕೆಗಿಂತ ಸಾಧಾರಣ ಮಳೆಯಾಗಿದೆ. ಹೆಚ್ಚಿನ ಮಳೆಯಾಗಿ ಜಲಾಶಯಗಳು ಭರ್ತಿಯಾಗಿರುವುದರಿಂದ ನೀರು ಹೊರ ಬಿಡಲಾಗುತ್ತಿದೆ. ಹೇಮಾವತಿ ಸಹ ತುಂಬಿ ಹರಿಯುತ್ತಿದ್ದು ಜಲಾಶಯದಿಂದ ಹೆಚ್ಚು ನೀರು ಬಿಡಲಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಿಂದ 1.20 ಲಕ್ಷ ಕ್ಯೂಸೆಕ್‌ಕ್ಕೂ ಹೆಚ್ಚು ನೀರು ಜಲಾಶಯದಿಂದ ಬಿಡಲಾಗುತ್ತಿದ್ದು, ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ ಅವುಗಳನ್ನೆಲ್ಲ ಪರಿಶೀಲಿಸಲಾಗಿದೆ ಎಂದರು.