ಹೊಸದಿಗಂತ ವರದಿ, ಬಳ್ಳಾರಿ:
ದೇಶಕ್ಕೆ ಸ್ವಾತಂತ್ಯ ತಂದು ಕೊಟ್ಟ ಮಹಾನುಭಾವ ಮಹಾತ್ಮ ಗಾಂಧಿ ಅವರ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 2006 ರಲ್ಲಿ ನಮ್ಮ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅದನ್ನು ಬಿಜೆಪಿ ಅವರು, ವಿಬಿ ಜೀ ರಾಮ್ ಜೀ ಎಂದು ಮರು ನಾಮಕರಣ ಮಾಡಲು ಹೊರಟಿದ್ದು, ಬರುವ ದಿನಗಳಲ್ಲಿ 500 ರೂ.ನೋಟ್ ಗಳಲ್ಲಿರುವ ಗಾಂಧೀಜಿ ಅವರ ಫೋಟೋವನ್ನು ಎಲ್ಲಿ ತೆಗೆಯುತ್ತಾರೋ ಅನುಮಾನ ಮೂಡಿಸಿದೆ, ಭಯ ಹುಟ್ಟಿಸಿದೆ. ಬಿಜೆಪಿ ಅವರು ಹೊಸ ಕಾರ್ಯಕ್ರಮಗಳಿಗೆ ಯಾವುದೇ ಹೆಸರನ್ನು ಇಟ್ಟುಕೊಳ್ಳಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ನಮ್ಮ ಅವಧಿಯಲ್ಲಿನ ಯೋಜನೆಗೆ ದೇಶದ ಸ್ವಾತಂತ್ರ್ಯ ಸೇನಾನಿ ಅವರ ಹೆಸರನ್ನು ತೆಗೆದು ಜಿ ರಾಮ್ ಜಿ ಹೆಸರನ್ನು ಬದಲಾವಣೆ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ಕೇಂದ್ರದ ಈ ಕ್ರಮ ಖಂಡಿಸಿ ಜಿಲ್ಲಾ ಕೇಂದ್ರ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ನಾವು ನುಡಿದಂತೆ ಜ.24 ರಂದು ರಾಜ್ಯದ 42,347 ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗುವುದು. ಜಿಲ್ಲೆಯಲ್ಲಿ 800 ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಬಿಜೆಪಿ ಅವರಂತೆ ಸುಳ್ಳು ಹೇಳುವ ಸಂಸ್ಕೃತಿ ನಮ್ಮದಲ್ಲ . ಬಳ್ಳಾರಿಯ ಮುಂಡರಗಿ ಪ್ರದೇಶದಲ್ಲಿ 5600 ಮನೆಗಳು ಎಎಚ್ ಪಿ ಸ್ಕೀಂ ನಡಿ ನಿರ್ಮಾಣಗೊಂಡಿದ್ದು, ಶೀಘ್ರದಲ್ಲೇ ಹಸ್ತಾಂತರಿಸಲಾಗುವುದು ಎಂದರು.
ರಾಹುಲ್ ಗಾಂಧಿ ಅವರು ತಮಿಳುನಾಡಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ರು, ಮೈಸೂರಿನಲ್ಲಿ ಸಿ.ಎಂ.ಹಾಗೂ ಡಿಸಿಎಂ ಅವರು ಭೇಟಿ ಮಾಡಿರುವುದು ನಿಜ. ಅದನ್ನೇ ಬೇರೆ ಬೇರೆ ರೀತಿಯಲ್ಲಿ ಅರ್ಥೈಸುವುದು ಸರಿಯಲ್ಲ. ನಮ್ಮ ನಾಯಕರು ಬಂದಾಗ ಭೇಟಿ ಮಾಡುವುದು ಸಾಮಾನ್ಯ ಎಂದರು.
ಮಾಜಿ ಸಚಿವರಾದ ಶ್ರೀರಾಮುಲು ಹಾಗೂ ಜನಾರ್ಧನ್ ರೆಡ್ಡಿ ಸೇರಿ ಬಿಜೆಪಿ ನಾಯಕರು ಬಳ್ಳಾರಿಯಿಂದ ಬೆಂಗಳೂರು ವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರಂತೆ, ಇದು ಯಾವ ಪುರುಷಾರ್ಥಕ್ಕೆ ತಿಳಿಯುತ್ತಿಲ್ಲ. ಬ್ಯಾನರ್ ಗಲಾಟೆ ಯಾರಿಂದ ಆಯ್ತು, ಹೇಗೆ ಆಯ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ, ಇನ್ನೂ ವರದಿ ಕೈ ಸೇರಿಲ್ಲ. ಬಿಜೆಪಿ ಅವರಿಗೆ ಬೇರೆ ಕೆಲಸ ಇಲ್ಲ ಅದಕ್ಕೆ, ಪಾದಯಾತ್ರೆ ಶುರು ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸoಸದ ಈ.ತುಕಾರಾಂ, ಶಾಸಕರಾದ ನಾರಾ ಭರತ್ ರೆಡ್ಡಿ, ಜೆ.ಎನ್.ಗಣೇಶ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮಾಜಿ ಏಮ್ಮೆಲ್ಸಿ ಕೆ.ಎಸ್.ಎಲ್.ಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮೇಯರ್ ಪಿ.ಗಾದೆಪ್ಪ, ಹೂಡಾ ಅಧ್ಯಕ್ಷ ಇಮಾಮ್ ನಿಯಾಜಿ, ಮುಖಂಡರಾದ ಎ.ಮಾನಯ್ಯ, ಪಾಲಿಕೆ ಸದಸ್ಯರಾದ ವಿವೇಕ್, ಆಸೀಫ್ ಸೇರಿದಂತೆ ಇತರರಿದ್ದರು.


