ಹೊಸದಿಗಂತ ವರದಿ, ಚಿತ್ರದುರ್ಗ:
ಕೆಲವು ರಾಜಕೀಯ ಶಕ್ತಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುರುದ್ದೇಶದಿಂದ ನೊಣಬ ಸಮಾಜ ಸೇರಿದಂತೆ ವೀರಶೈವ ಲಿಂಗಾಯತ ಸಮಾಜ ಒಡೆಯುವ ದುಸ್ಸಾಹಸಕ್ಕೆ ಕೈಹಾಕಿದ ಕರಾಳ ಇತಿಹಾಸವನ್ನು ನೊಣಬ ಸಮಾಜ ಬಾಂಧವರು ಮರೆಯಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಹೊಳಲ್ಕೆರೆ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಗುರು ಸಿದ್ದರಾಮೇಶ್ವರರ ೮೫೩ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನೊಣಬ ಸಮಾಜ ಕೆರೆ ಕಟ್ಟೆಗಳನ್ನು ಕಟ್ಟುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿದೆ. ಆದರೆ ಯಾವುದೇ ಸಮಾಜವನ್ನು ಒಡೆಯುವ ಕೆಲಸ ಮಾಡಿಲ್ಲ. ಅದರಂತೆ ಕೆಲವು ರಾಜಕೀಯ ಶಕ್ತಿಗಳು ಸಮಾಜ ಒಡೆಯುವ ಷಡ್ಯಂತ್ರ ನಡೆಸುತ್ತಿದ್ದು, ಇದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ನೊಣಬ ಸಮಾಜ ಬೇಡುವ ಸಮಾಜವಲ್ಲ. ಅದು ತನ್ನದೇ ಆದ ಕೊಡುಗೆ ನೀಡುವ ಸಮಾಜ. ಸಮಾಜದಲ್ಲಿ ಬಡವರಿದ್ದು, ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಹಾಗಾಗಿ ಸಮಾಜಕ್ಕೆ ನ್ಯಾಯ ಕೊಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ದಾವಣಗೆರೆ ಭಾಗದಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯ ಸ್ಥಾಪಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಾನು ಸೇರಿದಂತೆ ಸಮಾಜ ಎಲ್ಲ ಬಾಂಧವರು ಸಹಕಾರ ನೀಡಬೇಕು. ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸೊಲ್ಲಾಪುರದಲ್ಲಿ ಮೊದಲು ಜಯಂತಿ ಆರಂಭವಾಯಿತು. ಬಳಿಕ ವಿಜಾಪುರದಲ್ಲಿ ಆಚರಣೆ ಆರಂಭಿಸಿದ್ದು, ಇಂದಿಗೂ ವಿಜೃಭಣೆಯಿಂದ ನಡೆಯುತ್ತಿದೆ. ಇಂದಿಗೂ ಅವರು ಕಟ್ಟಿದ ಕೆರೆ ಸೊಲ್ಲಾಪುರದಲ್ಲಿದೆ. ಈ ನಿಟ್ಟಿನಲ್ಲಿ ಶ್ರೀಗುರು ಸಿದ್ದರಾಮೇಶ್ವರರ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತದೆ. ಯಾರಿಗೂ ತೊಂದರೆ ಕೊಡದೆ ಬದುಕಿದರೆ ಬದುಕು ಸಾರ್ಥಕ ಎಂಬ ಸಂದೇಶವನ್ನು ಶರಣರು ನೀಡಿದ್ದಾರೆ. ಅದರಂತೆ ಎಲ್ಲರೂ ಒಟ್ಟಾಗಿ ಬಾಳಬೇಕು. ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಶ್ರೀ ಗುರು ಸಿದ್ದರಾಮೇಶ್ವರರು ಕೃಷಿಕರು, ಕೆರೆ-ಕಟ್ಟೆ ನಿರ್ಮಾತೃಗಳು. ತರಳಬಾಳು ಹುಣ್ಣಿಮೆ ಮಾದರಿಯಲ್ಲೇ ಸಿದ್ದರಾಮೇಶ್ವರ ಜಯಂತಿ ಒಂದೊಂದು ಕ್ಷೇತ್ರದಲ್ಲಿ ಆಚರಿಸಲಾಗುತ್ತದೆ. ಲಿಂಗಾಯತ ಸಮುದಾಯವನ್ನು ತುಳಿಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಶಾಮನೂರು ಶಿವಶಂಕರಪ್ಪ ಅವರ ಅಕಾಲಿಕ ನಿಧನದಿಂದ ತೆರವಾದ ಅಖಿಲ ಭಾರತೀಯ ವೀರಶೈವ ಮಹಾಸಭಾ ಅಧ್ಯಕ್ಷರ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರನ್ನು ಆಯ್ಕೆ ಮಾಡುವಂತೆ ಮಠಾಧೀಶರಲ್ಲಿ, ಸಮುದಾಯದವರಲ್ಲಿ ಮನವಿ ಮಾಡಿದರು.
ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರುಪರ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಡಾ.ಎಂ.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮುಖಂಡರಾದ ಲಿಂಗಮೂರ್ತಿ, ಅನಿತ್‌ಕುಮಾರ್, ಹನುಮಂತೇಗೌಡ, ಮಾಧುರಿ ಗಿರೀಶ್, ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ನಾಡಿವ ವಿವಿಧೆಡೆಗಳಿಂದ ಆಗಮಿಸಿದ್ದ ನೊಣಬ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಹಾಜರಿದ್ದರು.


