ಹೊಸದಿಗಂತ ವರದಿ, ಚಿತ್ರದುರ್ಗ:
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಿಕಾರಿಪುರದಲ್ಲಿ ಪಾದಯಾತ್ರೆ ಮಾಡುವ ಬದಲು ಚುನಾವಣೆಗೆ ಅಲ್ಲಿಂದಲೇ ಸ್ಪರ್ಧಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಹ್ವಾನ ನೀಡಿದರು.
ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿದೆ. ಹಾಗಾಗಿ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಅಪಪ್ರಚಾರ ನಡೆಸುತ್ತಿದೆ. ನಿನ್ನೆ ಜರ್ಮನಿ ದೇಶದ ಚಾನ್ಸಲರ್ ಕರ್ನಾಟಕ ಕ್ಕೆ ಬಂದಿದ್ದರು. ಆದರೆ ನಮ್ಮ ರಾಜ್ಯದ ಮುಖ್ಯಮಂತ್ತಿ. ಉಪ ಮುಖ್ಯಮಂತ್ರಿ ಯವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ರಾಜ್ಯ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದ್ದು, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ರೈತರ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಇದರ ವಿರುದ್ದ ಬಿಜೆಪಿ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಜ.೧೭ ರಂದು ಬಳ್ಳಾರಿಯಿಂದ ಹೋರಾಟ ಆರಂಭಿಸಲಾಗುವುದು ಎಂದರು.
ಗ್ರಾಮ ಸ್ವರಾಜ್ಯ ಗಾಂಧೀಜಿಯವರ ಕನಸಾಗಿತ್ತು. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಕೆಲಸ ಮಾಡಲಿದೆ. ಈ ಹಿಂದೆ ಇದ್ದಂತೆಯೇ ಕಾಮಗಾರಿ ವಿಚಾರಗಳು ಗ್ರಾ.ಪಂ. ಹಂತದಲ್ಲಿಯೇ ತೀರ್ಮಾನಿಸಲಾಗುವುದು. ಈ ಹಿಂದೆ ಇದ್ದ ಮನ್ರೇಗಾ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿತ್ತು. ಬಡವರಿಗೆ ಹಣ ತಲುಪುತ್ತಿರಲಿಲ್ಲ. ಈಗ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಹಾಕಲಾಗುವುದು. ಇದರಿಂದ ಹಣ ದುರುಪಯೋಗಕ್ಕೆ ಕಡಿವಾಣ ಬೀಳಲಿದೆ ಎಂದರು.
ಈ ಮೊದಲು ಹಳೆಯ ಕಾಮಗಾರಿಗಳನ್ನೆ ಮತ್ತೆ ಮಾಡಿರುವಂತೆ ತೋರಿಸಿ ಬೋಗಸ್ ಬಿಲ್ ಪಡೆಯಲಾಗುತ್ತಿತ್ತು. ಇದರಿಂದ ಯಾವುದೇ ಅಸೆಟ್ ಸೃಷ್ಟಿಯಾಗುತ್ತಿರಲಿಲ್ಲ. ಈಗ ಇದಕ್ಕೆ ಅವಕಾಶವಿಲ್ಲ. ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿದ್ದು ಜಿ ರಾಮ್ ಜಿ ಯೋಜನೆ ಕುರಿತು ಅಪಪ್ರಚಾರ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದರು.
ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ಮಧುಗಿರಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಬಿಜೆಪಿ ಮುಖಂಡರಾದ ಡಾ.ಸಿದ್ದಾರ್ಥ ಗುಂಡಾರ್ಪಿ, ಅನಿತ್‌ಕುಮಾರ್, ಜಿ.ಎಂ.ಸುರೇಶ್, ಮಾಧುರಿ ಗಿರೀಶ್, ವೀರಶೈವ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.


