ನಿಫಾ ಸೋಂಕಿತ ರೋಗಿಗೆ ಆರೈಕೆ ಮಾಡಿದ್ದ ನರ್ಸ್‌ಗೂ ಸೋಂಕು, ಎಂಟು ದಿನಗಳಿಂದ ಕೋಮಾದಲ್ಲಿ!

ದಿಗಂತ ವರದಿ ಕಡಬ:

ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾದಲ್ಲಿ ದಿನ ದೂಡುತ್ತಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬವರ ಪುತ್ರ ಟಿಟ್ಟೋ ತೋಮಸ್(24) ಇದೀಗ ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿರುವ ಯುವಕ.

ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ ನಲ್ಲಿ 2023 ರಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದು, 2023 ರ ಸೆಪ್ಟೆಂಬರ್ ನಲ್ಲಿ ನಿಫಾ ವೈರಸ್ ಹೊಂದಿದ್ದ ರೋಗಿಯ ಆರೈಕೆ ಮಾಡಿದ್ದಾರೆ ಎನ್ನಲಾಗಿದೆ.

ಕ್ವಾರಂಟೈನ್ ನಲ್ಲಿದ್ದ ಟಿಟ್ಟೋ ಥಾಮಸ್ ಗೆ ಎರಡು ತಿಂಗಳು ಕಳೆದ ನಂತರ ವಿಪರೀತ ತಲೆನೋವು ಕಾಣಿಸಿಕೊಂಡಿದ್ದು, ಡಿಸೆಂಬರ್ ನಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನ ಸ್ಟ್ರೋಕ್‌ಗೆ ತುತ್ತಾಗಿರುವುದು ತಿಳಿದು ಬಂದಿದ್ದು, ಮರುದಿನವೇ ಕೋಮಾಗೆ ಜಾರಿದ್ದಾರೆ ಎನ್ನಲಾಗಿದೆ. ನಂತರದ ದಿನಗಳಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯ ವತಿಯಿಂದಲೇ ಚಿಕಿತ್ಸೆ ನೀಡಲಾಗಿದ್ದು, ಕಳೆದ ಎಂಟು ತಿಂಗಳಲ್ಲಿ ಯಾವುದೇ ಫಲ ಕಾಣದ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿಚಾರಿಸಿದಾಗ ಆಡಳಿತ ಮಂಡಳಿಯು ಈಗಾಗಲೇ ರೂ.40 ಲಕ್ಷಗಳಷ್ಟು ಖರ್ಚನ್ನು ಭರಿಸಿದ್ದು, ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಇನ್ಮುಂದೆ ನಿಭಾಯಿಸುವುದು ಕಷ್ಟ ಎಂದು ಪ್ರತಿಕ್ರಿಯೆ ನೀಡಿದೆ.

ನಿಫಾ ವೈರಸ್ ಬಾಧಿಸಿರುವ ಹಿನ್ನೆಲೆಯಲ್ಲಿ ಅತ್ಯುನ್ನತ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಕುಟುಂಬಸ್ಥರು ಕೇರಳ ಸರಕಾರದ ಮೊರೆ ಹೋಗಿದ್ದು, ಸರಕಾರದ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.

ನಿಫಾ ಸೋಂಕಿನಿಂದ ತತ್ತರಿಸಿರುವ ಟಿಟ್ಟೋ ಥಾಮಸ್ ನ ಪ್ರಾಣ ಉಳಿಸುವ ಸಲುವಾಗಿ ತಂದೆ, ತಾಯಿ ಹಾಗೂ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಸಹೋದರ ಕಳೆದ ಎಂಟು ತಿಂಗಳಿನಿಂದ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಆಸ್ಪತ್ರೆಗೆ ಅಲೆದಾಡುವುದೇ ದೈನಂದಿನ ಕಾಯಕವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!