ಹೊಸದಿಗಂತ ವರದಿ ಹುಬ್ಬಳ್ಳಿ:
ತಮ್ಮ ಅವಧಿಯಲ್ಲಿಯೇ ಮುಡಾ ಹಗರಣ ಆಗಿದೆ ಎಂದು ಬಿಜೆಪಿ ಮೊದಲು ಒಪ್ಪಿಕೊಳ್ಳಲಿ ಬಳಿಕ ಬೇಕಾದರೆ ಪಾದಯಾತ್ರೆ ಮಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಬಿಜೆಪಿಯ ವಿರುದ್ಧ ಹರಿಹಾಯ್ದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಹಾಗೂ ಮುಡಾ ಹಗರಣ ಕುರಿತು ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಂಡಿದೆ. ಈಗಾಗಲೇ ಸಚಿವರಾಗಿದ್ದ ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಐಡಿ, ಸಿಬಿಐ ಹಾಗೂ ಇಡಿ ಸಹ ತನಿಖೆ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ನಡೆಸಲು ಕಾರಣ ಏನೆಂಬುದು ತಿಳಿಯುತ್ತಿಲ್ಲ ಎಂದರು.
ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಗಳ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವ ವೇಳೆ ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಬಗ್ಗೆ ಚರ್ಚಿಸಲು ಸದನದಲ್ಲಿ ಏಳು ಗಂಟೆ ಅವಕಾಶ ನೀಡಲಾಗಿತ್ತು ಎಂದು ತಿಳಿಸಿದರು.
ಬಿಜೆಪಿ ಕಾಲದಲ್ಲಿಯೇ ಮುಡಾದಲ್ಲಿ ಹಗರಣವಾಗಿದೆ. ನಮ್ಮ ಕಾಲದಲ್ಲಿ ನಾವು ಹಗರಣ ಮಾಡಿದ್ದೇವೆ ಅಂತ ಬಿಜೆಪಿಯವರು ಲಿಖಿತ ರೂಪದಲ್ಲಿ ನೀಡಲಿ. ಕಾನೂನುಬಾಹಿರವಾಗಿ ನಿವೇಶನವನ್ನು ಹಂಚಿದ್ದು, ಅದಕ್ಕಾಗಿ ತನಿಖೆ ಮಾಡಬೇಕಿದೆ ಬರೆದು ಕೊಡಲಿ. ಜನಸಾಮಾನ್ಯರ ಮೂಕರನ್ನಾಗಿ ಮಾಡಿದ್ದೇವೆ ಎಂದು ಮೊದಲು ಒಪ್ಪಿಕೊಳ್ಳಲಿ. ಬಿಜೆಪಿ ಅವರೇ ನಿವೇಶ ನೀಡಿ, ಹಗರಣ ಮಾಡಿ ಪಾದಯಾತ್ರೆ ಮಾಡುವುದು ಯಾವ ಧರ್ಮ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಏಕೆ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ಅವರು ಗ್ಯಾರಂಟಿ ಗಳಿಗಾಗಿ 60 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಹಿಂದುಳಿದ ನಾಯಕರೊಬ್ಬರು ಈರೀತಿ ಬೆಳೆಯುತ್ತಿರುವುದು ವಿರೋಧ ಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಮೋದಿ ಅವರು ಪ್ರಧಾನಿಯಾಗಿದ್ದಾಗ ರಾಜ್ಯದಲ್ಲಿ 136 ಸ್ಥಾನ ಕಾಂಗ್ರೆಸ್ ಗೆದ್ದಿರೋದ ಅವರಿಗೆ ನೋವಾಗಿದೆ ಎಂದು ತಿಳಿಸಿದರು.