ಅರವಿಂದ್ ಕೇಜ್ರಿವಾಲ್ ಅಬಕಾರಿ ನೀತಿ ಹಗರಣದ ‘ಸೂತ್ರಧಾರಿ’: ಸಿಬಿಐ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರವಿಂದ್ ಕೇಜ್ರಿವಾಲ್ ದೆಹಲಿಯ ಅಬಕಾರಿ ನೀತಿ ಪ್ರಕರಣದ ‘ಸೂತ್ರಧಾರ’ ಎಂದು ಕೇಂದ್ರೀಯ ತನಿಖಾ ದಳ (CBI) ಸೋಮವಾರ ಕರೆದಿದೆ.

ಸಿಬಿಐ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಡಿಪಿ ಸಿಂಗ್ ಅವರು ದೆಹಲಿ ಹೈಕೋರ್ಟ್‌ನಲ್ಲಿ, ದೆಹಲಿ ಮುಖ್ಯಮಂತ್ರಿಯ ವಿರುದ್ಧ ಸಾಕ್ಷ್ಯಗಳು ಲಭಿಸಿದಾಗ ಸಂಸ್ಥೆ ಅವರನ್ನು ಬಂಧಿಸಿತು ಎಂದಿದ್ದಾರೆ.

ಈ ವೇಳೆ ಕೋರ್ಟ್ ನಿಯಮಿತ ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿ ಆದೇಶವನ್ನು ಕಾಯ್ದಿರಿಸಿತ್ತು.

ಹಗರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರ ಬಿಂದುವಾಗಿದ್ದು, ಅವರೇ ಅದರ ಮಾಸ್ಟರ್ ಮೈಂಡ್ ಎಂದು ತನಿಖಾ ಸಂಸ್ಥೆ ಹೇಳಿದೆ. ಕ್ಯಾಬಿನೆಟ್ ಮುಖ್ಯಸ್ಥರಾಗಿರುವ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿಗೆ ಸಹಿ ಹಾಕಿ ಅದನ್ನು ತಮ್ಮ ಸಹಚರರಿಗೆ ನೀಡಿದ್ದಾರೆ. ಇದು ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ನಡೆದಿದೆ. ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ತನಿಖಾ ಸಂಸ್ಥೆಗೆ ಸಾಕ್ಷ್ಯ ಸಿಕ್ಕಿದೆ ಎಂದು ಸಿಬಿಐ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದೇ ಸಮಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರವೂ ಸಿಎಂ ನೇರವಾಗಿ ಅಥವಾ ಪರೋಕ್ಷವಾಗಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದರು.

ಪೊಲೀಸ್ ರಿಮಾಂಡ್‌ನಲ್ಲಿರುವಾಗ ಹೊರತುಪಡಿಸಿ, ಬಂಧನದ ನಂತರ ತನಿಖಾ ಸಂಸ್ಥೆ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರನ್ನು ವಿಚಾರಣೆ ನಡೆಸಿಲ್ಲ. ಕೇಜ್ರಿವಾಲ್ ವಿರುದ್ಧ ಏಜೆನ್ಸಿ ಬಳಿ ಯಾವುದೇ ನೇರ ಸಾಕ್ಷ್ಯಗಳಿಲ್ಲ ಮತ್ತು ಅವರ ಮನೆಯಿಂದ ಏನನ್ನೂ ವಶಪಡಿಸಿಕೊಂಡಿಲ್ಲ. ಅಬಕಾರಿ ನೀತಿಯ ರಚನೆ ಅಥವಾ ಅನುಷ್ಠಾನದಲ್ಲಿ ಕೇಜ್ರಿವಾಲ್ ಮಾತ್ರ ಭಾಗಿಯಾಗಿಲ್ಲ. ಆದರೆ ಇದು ಎಲ್‌ಜಿ ಮತ್ತು ಒಂಬತ್ತು ಸಚಿವಾಲಯಗಳು ಸೇರಿದಂತೆ ಕನಿಷ್ಠ 50 ಅಧಿಕಾರಿಗಳನ್ನು ಒಳಗೊಂಡ ಸಾಂಸ್ಥಿಕ ನಿರ್ಧಾರವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.

ಸಿಬಿಐ ಇಂದು ಕೇಜ್ರಿವಾಲ್ ಮತ್ತು ಇತರರ ವಿರುದ್ಧ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!