ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಂಸ ಸಾಗಾಟಕ್ಕೆ ಅಡಚಣೆ ಪ್ರಕರಣದಲ್ಲಿ ಬಂಧನವಾಗಿದ್ದ ರಾಷ್ಟ್ರ ಜಾಗೃತಿ ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿಗೆ ಬೆಂಗಳೂರು ನಗರದ 5ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪರಿಶೀಲನೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಅರೆಸ್ಟ್ ಅಗಿದ್ದ ಪುನೀತ್ ಕೆರೆಹಳ್ಳಿಗೆ ಜುಲೈ 27ರಂದು ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಇದರ ಬೆನ್ನಲ್ಲೇ ಷರತ್ತುಬದ್ಧ ಜಾಮೀನು ಮಂಜೂರು ಆಗಿದೆ.
ಪ್ರತಿ ತಿಂಗಳ ಮೊದಲ ಭಾನುವಾರ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ದೇಶಬಿಟ್ಟು ಹೋಗಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಮತ್ತೆ ಇಂತಹದ್ದೆ ಅಪರಾಧ ಕೃತ್ಯದಲ್ಲಿ ಭಾಗಿ ಆಗಬಾರದು ಎಂದು ಕೋರ್ಟ್ ಷರತ್ತುಗಳನ್ನು ವಿಧಿಸಿ, ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸವನ್ನು ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಪೊಲೀಸರು ಮಧ್ಯಪ್ರವೇಶಿಸಿ, ಮಾಂಸವನ್ನು ವಶಪಡಿಸಿಕೊಂಡಿದ್ದರು. ಪೊಲೀಸರ ಭದ್ರತೆಯಲ್ಲಿ ಕೋಲ್ಡ್ ಸ್ಟೋರೇಜ್ಗೆ ಮಾಂಸ ತುಂಬಿದ ನಾಲ್ಕು ವಾಹನಗಳು ರವಾನೆಯಾಗಿದ್ದವು. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದರು.