ಪಾದಯಾತ್ರೆಗೆ ನಾವು ಅಧಿಕೃತವಾಗಿ ಅನುಮತಿ ನೀಡಲ್ಲ: ಸಚಿವ ಜಿ. ಪರಮೇಶ್ವರ್

ಹೊಸದಿಗಂತ ವರದಿ,ಹುಬ್ಬಳ್ಳಿ:

ಪಾದಯಾತ್ರೆಯಿಂದ ನಿರೀಕ್ಷೆಯಂತೆ ಜೆಡಿಎಸ್ ಹಿಂದೆ ಸರಿದಿದ್ದಾರೆ. ಮುಂದೆಯಾದರೂ ಸಹ ಬಿಜೆಪಿ ಹಾಗೂ ಜೆಡಿಎಸ್ ಬೇರೆಯಾಗಬೇಕು. ಅದರ ಮುನ್ಸೂಚನೆಗಳು ಈಗಲೇ ಕಾಣುತ್ತಿವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಮಂಗಳವಾರ ಸಂಜೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ ಸ್ಪಷ್ಟಿಕರಣ ನೀಡಿದ್ದಾರೆ. ನಿವೇಶನಗಳನ್ನು ಯಾರು, ಯಾವ ಸಮಯದಲ್ಲಿ ನೀಡಿದ್ದಾರೆ ಎಂಬುದರ ಬಗ್ಗೆ ತಿಳಿಸಿದ್ದಾರೆ. ಆಯೋಗ ನೇತೃತ್ವದಲ್ಲಿ ತನಿಖೆ ಸಹ ಕೈಗೊಳ್ಳಲಾಗಿದ್ದು, ಎಲ್ಲವೂ ಗೊತ್ತಾಗಲಿದೆ ಎಂದರು.

ಬಿಜೆಪಿಯಲ್ಲಿ ಗುಂಪುಗಾರಿಕೆ ಆಗಿದೆ. ಜೆಡಿಎಸ್ ಸಹಕಾರ ನೀಡದಿರುವುದು ನೋಡಿದರೆ ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಅದು ಕೆಲವು ಬಿಜೆಪಿ ಅವರಿಗೆ ಗೊತ್ತಾಗಿದೆ. ಇನ್ನೂ ಕೆಲವರು ರಾಜಕೀಯ ಕಾರಣಕ್ಕೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಪಾದಯಾತ್ರೆಗೆ ನಾವು ಅಧಿಕೃತವಾಗಿ ಅನುಮತಿ ನೀಡುವುದಿಲ್ಲ. ಹೋರಾಟ ಹಾಗೂ ಪಾದಯಾತ್ರೆ ಮಾಡುವುದು ಅವರ ಹಕ್ಕಾಗಿದೆ ಮಾಡಲಿ. ಶಾಂತಿಯಿಂದ ಮಾಡಿದರೇ ನಮ್ಮದು ತಕರಾರು ಇಲ್ಲ. ಆದರೆ ಶಾಂತಿಕದಡುವ ಹಾಗೂ ಕಾನೂನು ಬಾಹಿರಾಗಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಪುಟ ಪುನರ್ ರಚನೆ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ನಿರ್ಧಾರ ಕೈಗೊಳ್ಳಬೇಕು. ಹೈಕಮಾಂಡ ನಿಂದ ಸಲಹೆ ಸೂಚನೆ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.

ಡ್ರಗ್ಸ್ ಹಾಗೂ ಗಾಂಜಾ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಬೇಕು. ಸಂಪೂರ್ಣವಾಗಿ ತಡೆಯುವುದು ನಮ್ಮ ಉದ್ದೇಶವಾಗಿದೆ. ಆದರಿಂದ ಪೊಲೀಸ್ ಇಲಾಖೆಯಿಂದ ಶಾಲಾ ಕಾಲೇಜ್‌ಗಳಿಗೆ ಭೇಟಿ ನೀಡಿ ಅರಿವು ಮೂಡಿಸಲು ಅಕಾರಿಗಳಿಗೆ ಸೂಚಿಸಲಾಗಿದೆ.

ಪಿಎಸ್‌ಐ ಸಿಬ್ಬಂದಿ ನೇಮಕ ಸದ್ಯದಲ್ಲೇ ಪರಿಹಾರವಾಗಲಿದೆ. ಇದಕ್ಕೆ ಸಂಬಂಸಿದ ಎಲ್ಲ ಸಮಸ್ಯೆಗಳ ಪರಿಹರಿಸಲಾಗಿದೆ. ಕಲ್ಯಾಣ ಕರ್ನಾಟಕ ಮೀಸಲಾತಿ ಬಗ್ಗೆ ಕೆಲವು ಗೊಂದಲಗಳಿದ್ದು, ಆದಷ್ಟು ಬೇಗ ಸರಿಪಡಿಸಲಾಗುವುದು ಎಂದು ತಿಳಿಸಿದರು.

ಹಂಪಿಯಲ್ಲಿ ಸಾಮಾನ್ಯವಾಗಿ ವಿದೇಶಿಗರು ಬರುತ್ತಾರೆ. ಅಕ್ರಮವಾಗಿ ಬಂದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ವಯನಾಡು ದುರಂತ ನಿಜಕ್ಕೂ ನೋವಿನ ಸಂಗತಿ. ಸರ್ಕಾರದಿಂದ ಏನು ಸಹಾಯಬೇಕು ಮಾಡಲಾಗುವುದು. ದೇವರ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!