ಕೊಡಗಿನಲ್ಲಿ ಭಾರೀ ಮಳೆ: ಹಲವು ಕುಟುಂಬಗಳು ಕಾಳಜಿ ಕೇಂದ್ರಗಳಿಗೆ ಶಿಫ್ಟ್

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಭಾಗಮಂಡಲ ಹೋಬಳಿಯ ಭಾಗಮಂಡಲ ಗ್ರಾಮದ ಕಾಶಿ ಮಠದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಎರಡು ಕುಟುಂಬಗಳ ಏಳು ಸದಸ್ಯರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ವೀರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಕಾವೇರಿ ನದಿ ದಡ ವ್ಯಾಪ್ತಿಯ ಹೊಳೆಕರೆ ಪೈಸಾರಿಯಲ್ಲಿ ಪ್ರವಾಹದ ಅಪಾಯದ ಭೀತಿಯಲ್ಲಿರುವ ಭಾಗಶಃ ಕುಟುಂಬಗಳನ್ನು ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ನುಳಿದ ಕುಟುಂಬಗಳನ್ನು ಸ್ಥಳಾಂತರಿಸಲಾಗುತ್ತಿದೆ.

ವೀರಾಜಪೇಟೆ ಹೋಬಳಿ ತೋರ ಗ್ರಾಮದ ಭೂಕುಸಿತ ಪ್ರದೇಶದಲ್ಲಿರುವ ಕುಟುಂಬಗಳನ್ನೂ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿರುತ್ತದೆ
ಮಡಿಕೇರಿಯ ಇಂದಿರಾ ನಗರದಲ್ಲಿ ಎರಡು ಮನೆಗಳು ಅಪಾಯ ಸ್ಥಿತಿಯಲ್ಲಿದ್ದು, ಈ ಮನೆಗಳಲ್ಲಿ ವಾಸಿಸುವವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಹಾಲಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಮತ್ತೊಮ್ಮೆ ತಿಳಿಸಲಾಗಿದೆ ಹಾಗೂ ಇಂದಿರಾ ನಗರದಲ್ಲಿರುವ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಇರುವಂತೆ ತಿಳಿಸಲಾಗಿದೆ. ಸಮುದಾಯ ಭವನದ ಸಮಿತಿಗೂ ಈ ಮಾಹಿತಿ ನೀಡಿ ಸಮುದಾಯ ಭವನದ ಕೀಯನ್ನು ಪಡೆದು ಎರಡು ಕುಟುಂಬದವರು ತಾತ್ಕಾಲಿಕವಾಗಿ ಇರುವಂತೆ ವ್ಯವಸ್ಥೆ ಮಾಡಲಾಗಿದೆ.

ವೀರಾಜಪೇಟೆ ಪುರಸಭೆಗೆ ಸಂಬಂಧಪಟ್ಟಂತೆ ಕಾಳಜಿ ಕೇಂದ್ರವನ್ನು ಸೈಂಟ್ ಅನ್ನಮ್ಮ ಶಾಲೆಯಲ್ಲಿ ತೆರೆಯಲಾಗಿದೆ.
ಬೇತ್ರಿಯಲ್ಲಿ ಪೊಲೀಸ್ ನಿಯೋಜನೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಾವೇರಿ ನದಿ ನೀರು ಬೇತ್ರಿ ಸೇತುವೆಗೆ ಅಪ್ಪಳಿಸುತ್ತಿದೆ. ಸೇತುವೆಯ ಮೇಲ್ಭಾಗಕ್ಕೆ ನೀರು ಬರಲು ಕೇವಲ ಎರಡು ಅಡಿ ಮಾತ್ರ ಬಾಕಿಯಿದ್ದು, ರಾತ್ರಿವೇಳೆ ಈ ರಸ್ತೆಯಲ್ಲಿ ಸಂಚರಿಸುವವರು ಎಚ್ಚರದಿಂದ ತೆರಳಬೇಕೆಂದು ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರಪ್ಪ ಅವರು ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಮುಂಜಾಗ್ರತಾ ಕ್ರಮವಾಗಿ ರಾತ್ರಿ ವೇಳೆ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಇರುವ ಜನರು ಸಂಚರಿಸುವಾಗ ಎಚ್ಚರವಹಿಸುವಂತೆ ಮಾಧ್ಯಮಗಳ ಮೂಲಕ ಕೋರಿದ್ದಾರೆ.

ಮನೆಯಿಂದ ಹೊರ ಬರದಿರಿ: ಮೂರ್ನಾಡಿನಿಂದ ನಾಪೋಕ್ಲು-ಬೆಟ್ಟಗೇರಿಗೆ ಹೋಗುವ ಕೊಟ್ಟಮುಡಿ ಮರ್ಕಸ್ ಸಮೀಪ ಕಾವೇರಿ ಹೊಳೆ ತುಂಬಿ ಹರಿದು ರಸ್ತೆಯಲ್ಲಿ ನೀರು ನಿಂತಿದೆ. ಕೆಲವರು ತಮ್ಮ ಮಕ್ಕಳೊಂದಿಗೆ ನೀರನ್ನು ನೋಡಲು ವಾಹನದಲ್ಲಿ ಆ ಕಡೆಯಿಂದ ಈ ಕಡೆ ಬರುತ್ತಿದ್ದು, ಈ ಸಂಬಂಧ ಪ್ರಕಟನೆ ಹೊರಡಿಸಿರುವ ನಾಪೋಕ್ಲು ಪೊಲೀಸರು, ಯಾರೂ ಕೂಡಾ ಮನೆಯಿಂದ ಹೊರ ಬರದಿರುವಂತೆ ಸೂಚಿಸಿದ್ದಾರೆ.

ಸಾಕಾನೆ ಶಿಬಿರಕ್ಕೆ ಪ್ರವೇಶ ನಿಷೇಧ: ಕೊಡಗು ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯವರು ರೆಡ್ ಅಲರ್ಟ್ ಘೋಷಣೆ ಮಾಡಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಕುಶಾಲನಗರ ವಲಯ ವ್ಯಾಪ್ತಿಗೆ ಬರುವ ಪ್ರವಾಸಿ ತಾಣಗಳಾದ ದುಬಾರೆ ಸಾಕಾನೆ ಶಿಬಿರ ಮತ್ತು ಹಾರಂಗಿ ಸಸ್ಯ ಉದ್ಯಾನವನ (ಟ್ರೀ ಪಾರ್ಕ್)ಕ್ಕೆ ಜು.31ಹಾಗೂ ಆಗಸ್ಟ್ 1ರಂದು ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಕುಶಾಲನಗರ ವಲಯ ಅರಣ್ಯಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!