ನಾಳೆ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಕ್ಕೆ

ದಿಗಂತ ವರದಿ ಕಾರವಾರ :

ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯದಿಂದ ಅ. 1 ರಂದು ಬೆಳಿಗ್ಗೆ10ಗಂಟೆಗೆ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಪ್ರವಾಹದ ಅಂತಿಮ ಮುನ್ನೆಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.

ಜಲಾಶಯಕ್ಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನೆದಿನೇ ಏರುಗತಿಯಲ್ಲಿರುತ್ತದೆ. ಜಲಾಶಯದ ಗರಿಷ್ಠ ಮಟ್ಟವು 1819.00 ಅಡಿಗಳಾಗಿದ್ದು ಇಂದಿನ ಅಂದರೆ ದಿನಾಂಕ: 31.07.2024 ರಂದು ಬೆಳಗ್ಗೆ 8 ಘಂಟೆಗೆ ಜಲಾಶಯದ ನೀರಿನ ಮಟ್ಟ 1812.65 (86.51%) ಅಡಿಗಳಿಗೆ ತಲುಪಿದೆ.

ಈ ದಿನದ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಸುಮಾರು 82000 ಕ್ಯೂಸೆಕ್ಸ್ ಗಳಿಗಿಂತಲೂ ಅಧಿಕವಾಗಿದ್ದು ಇದೇ ರೀತಿಯಲ್ಲಿ ಜಲಾಶಯಕ್ಕೆ ಬರುವ ನೀರಿನ ಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಅತೀ ಶೀಘ್ರದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದೆ. ಆದ್ದರಿಂದ, ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಆ.1 ರಂದು ಬೆಳಗ್ಗೆ 10 ಜಲಾಶಯದಿಂದ ಹೊರಬಿಡಲಾಗುವುದು.

ಆದ್ದರಿಂದ, ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರುಗಳೊಂದಿಗೆ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!