ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಹುಲ್ ಗಾಂಧಿಗೆ ತಮ್ಮ ಜಾತಿ ಎಂಬುದೇ ಗೊತ್ತಿಲ್ಲ ಎಂಬುದಾಗಿ ಲೋಕಸಭೆಯಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಅನುರಾಗ್ ಠಾಕೂರ್ ವಿರುದ್ಧ ಪ್ರತಿಪಕ್ಷಗಳ ನಾಯಕರು ಮುಗಿಬಿದ್ದಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ಸಂಸದ ಚರಣ್ಜಿತ್ ಸಿಂಗ್ ಚನ್ನಿ ಅವರು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದಾರೆ.
ಸದನದಲ್ಲಿ ಕಾಂಗ್ರೆಸ್ ಸಂಸದರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಚರಣ್ಜಿತ್ ಸಿಂಗ್ ಚನ್ನಿ ಅವರು ಹಕ್ಕುಚ್ಯುತಿ ಮಂಡಿಸಿದ್ದಾರೆ.
ಮೋದಿ ಅವರು ಅನುರಾಗ್ ಠಾಕೂರ್ ಅವರು ಸಂಸತ್ನಲ್ಲಿ ಮಾಡಿದ ಭಾಷಣಕ್ಕೆ ಮೆಚ್ಚುಗೆ ಸೂಚಿಸಿದ್ದರು. ಇಂಡಿಯಾ ಒಕ್ಕೂಟದ ಮುಖವಾಡವನ್ನು ಅನುರಾಗ್ ಠಾಕೂರ್ ಅವರು ಹೇಗೆ ಬಯಲಿಗೆಳೆದಿದ್ದಾರೆ ನೋಡಿ ಎಂದು ಕರೆ ನೀಡಿದ್ದ ಮೋದಿ, ಅನುರಾಗ್ ಠಾಕೂರ್ ಅವರ ಭಾಷಣದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ, ಪ್ರಧಾನಿ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡಿಸಿದೆ.
ಅನುರಾಗ್ ಠಾಕೂರ್ ಹೇಳಿದ್ದೇನು?
ಸಂಸತ್ನಲ್ಲಿ ಮಾತನಾಡಿದ ಅನುರಾಗ್ ಠಾಕೂರ್,’ದೇಶದಲ್ಲಿ ಜಾತಿಗಣತಿ ಬಗ್ಗೆ ತುಂಬ ಮಾತನಾಡುತ್ತಾರೆ. ಜಾತಿಗಣತಿಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ ಎನ್ನುತ್ತಾರೆ. ಆದರೆ, ಜಾತಿಗಣತಿ ಬಗ್ಗೆ ಮಾತನಾಡುವವರಿಗೇ ತಮ್ಮ ಜಾತಿ ಯಾವುದು ಎಂದು ಗೊತ್ತಿಲ್ಲ” ಎಂಬುದಾಗಿ ಅನುರಾಗ್ ಠಾಕೂರ್ ಟೀಕಿಸಿದ್ದರು.
ಅನುರಾಗ್ ಠಾಕೂರ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿದರು. ‘ನೀವು ನನ್ನನ್ನು ಎಷ್ಟು ಅವಮಾನಿಸುತ್ತೀರೋ ಅವಮಾನಿಸಿ. ಆದರೆ, ನಾವು ಸಂಸತ್ನಲ್ಲಿ ಜಾತಿಗಣತಿ ವಿಧೇಯಕ ಮಂಡಿಸುತ್ತೇವೆ ಎಂಬುದನ್ನು ನೀವು ಮರೆಯದಿರಿ’ಎಂದರು.