ಬಿಜೆಪಿ ಪಾದಯಾತ್ರೆಗೆ ನಮ್ಮ ಬೆಂಬಲ ಇಲ್ಲ: ಕಾರಣ ತಿಳಿಸಿದ ಹೆಚ್.ಡಿ.ಕುಮಾರಸ್ವಾಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಪಾದಯಾತ್ರೆಗೆ ಇದು ಸೂಕ್ತ ಸಂದರ್ಭವಲ್ಲ ಎನ್ನುವ ಕಾರಣಕ್ಕೆ ನಾವು ಈ ಪಾದಯತ್ರೆಯಿಂದ ಹಿಂದೆ ಸರಿದಿದ್ದೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ಜೆ‌.ಟಿ.ದೇವೇಗೌಡರ ಅಧ್ಯಕ್ಷತೆಯ ಕೋರ್ ಕಮಿಟಿ ಬೆಂಗಳೂರಿನಲ್ಲಿ ಮಂಗಳವಾರ ತೀರ್ಮಾನ ಮಾಡಿದೆ. ಬಿಜೆಪಿ ನಾಯಕರು ಪಾದಯಾತ್ರೆ ಮಾಡಬೇಕು ಎಂದು ನಿರ್ಧಾರ ಕೈಗೊಂಡು ಸಿದ್ಧತೆ ಮಾಡುತ್ತಿದ್ದಾರೆ. ಆದರೆ, ಪಾದಯಾತ್ರೆಗೆ ಇದು ಸೂಕ್ತ ಸಂದರ್ಭವಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇಡೀ ಮಳೆ, ನೆರೆ, ಭೂ ಕುಸಿತ, ಬೆಳೆನಾಶದಿಂದ ತತ್ತರಿಸಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಪಾದಯಾತ್ರೆ ಮಾಡಿದರೆ ಜನರಿಂದ ಟೀಕೆಗಳು ಬರುವ ಸಾಧ್ಯತೆ ಇದೆ. ಇದೇ ಕಾರಣದಿಂದ ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಈ ಪಾದಯಾತ್ರೆಯಿಂದ ರಾಜ್ಯದ ಜನರಿಗೆ ಆಗುವ ಲಾಭವಾದರೂ ಏನು? ಇಲ್ಲಿ ಕಾನೂನು ಹೋರಾಟ ಮಾಡುವುದು ಮುಖ್ಯ. ಕೇವಲ ರಾಜಕೀಯವೇ ನಮಗೆ ಇಲ್ಲಿ ಮುಖ್ಯವಲ್ಲ. ಹೀಗಾಗಿ ನಾವು ಪಾದಯಾತ್ರೆಗೆ ನೈತಿಕ ಬೆಂಬಲವನ್ನೂ ನೀಡುವುದಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು? ಬೆಂಗಳೂರಿನಿಂದ ಮೈಸೂರುವರೆಗೂ ನಮ್ಮ ಪಕ್ಷಕ್ಕೆ ಶಕ್ತಿ ಇದೆ. ನಮ್ಮನ್ನೇ ಪರಿಗಣಿಸಿದಿದ್ದರೆ ಹೇಗೆ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ಈ ವಿಜಯದಲ್ಲಿ ನನ್ನ ಮನಸ್ಸಿಗೆ ನೋವಾಗಿದೆ. ಯಾವ ಕಾರಣಕ್ಕಾಗಿ ನಾವು ಪಾದಯಾತ್ರೆಗೆ ಬೆಂಬಲ ಕೊಡಬೇಕು ಎನ್ನುವುದು ಪ್ರಶ್ನೆ. ಈ ಪ್ರೀತಂಗೌಡ ಯಾರು? ಹಾಸನದಲ್ಲಿ ಹಾದಿಬೀದಿಯಲ್ಲಿ ಪೆನ್ ಡ್ರೈವುಗಳನ್ನು ಹಂಚಿದವರು ಯಾರೆನ್ನುವುದು ಗೊತ್ತಿದೆ. ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟುವನು ಈ ವ್ಯಕ್ತಿ. ಅಂತಹ ವ್ಯಕ್ತಿಯ ಜತೆಯಲ್ಲಿ ನಾವು ವೇದಿಕೆ ಮೇಲೆ ಕೂರಲು ಸಾಧ್ಯವೇ ಇಲ್ಲವಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆ ಬಗ್ಗೆ ನಮ್ಮ ನಾಯಕರು ವಿಸ್ತೃತವಾಗಿ ಚರ್ಚೆ ನಡೆಸಿದ್ದಾರೆ. ಎಲ್ಲರ ಅಭಿಪ್ರಾಯವೂ ಪಾದಯಾತ್ರೆ ಸದ್ಯಕ್ಕೆ ಬೇಡ, ಸ್ವಲ್ಪ ದಿನದ ನಂತರ ಮಾಡೋಣ ಎನ್ನುವುದೇ ಆಗಿದೆ. ಕೊಡಗು ಜಿಲ್ಲೆಯ ಪಕ್ಕದಲ್ಲಿಯೇ ಇರುವ ಕೇರಳದ ವಯನಾಡಿನಲ್ಲಿ ಭಾರೀ ಭೂ ಕುಸಿತ ಉಂಟಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕರು ಕಣ್ಮರೆಯಾಗಿದ್ದಾರೆ. ನಮ್ಮ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೆಡ್ ಅರ್ಲಟ್ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ನೆರೆ, ಭೂ ಕುಸಿತ ನಿರಂತರವಾಗಿದೆ. ಹೀಗಾಗಿ ಇಂಥ ಪರಿಸ್ಥಿತಿಯಲ್ಲಿ ಪಾದಯಾತ್ರೆ ಬೇಡ ಎನ್ನುವುದು ನಮ್ಮ ಪಕ್ಷದ ಅಭಿಪ್ರಾಯವಾಗಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಬಿಡದಿಯಿಂದ ಮೈಸೂರುವರೆಗೆ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಮಂಡ್ಯ, ಮೈಸೂರು ಭತ್ತದ ನಾಟಿ ಶುರುವಾಗಿದೆ. ಬಿಜೆಪಿ ನಾಯಕರು ಪೂರ್ವ ಸಿದ್ದತೆ ಮಾಡಿಕೊಂಡಿದ್ದರು. ಎಲ್ಲವನ್ನೂ ಅಂತಿಮಗೊಳಿಸಿದ ನಂತರ ನಮಗೂ ಮಾಹಿತಿ ಇರಲಿ ಎಂದು ಸಭೆಗೆ ಕರೆದು ಹೇಳಿದ್ದಾರಷ್ಟೇ. ಇದು ಸೂಕ್ತ ಸಂದರ್ಭ ಅಲ್ಲ ಹಾಗಾಗಿ ಹಿಂದೇ ಸರಿದ್ದೇವೆ. ಜನಸಮಾನ್ಯರ ಭಾವನೆ ಮುಖ್ಯ. ಇದಕ್ಕೆ ನಮ್ಮ ನೈತಿಕ ಬೆಂಬಲವೂ ಇಲ್ಲ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!