ವರದಕ್ಷಿಣೆ ತರಲು ನಿರಾಕರಣೆ: ವಾಟ್ಸಾಪ್ ಮೂಲಕ ಪತ್ನಿಗೆ ತಲಾಖ್ ಕೊಟ್ಟ ಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಸಾದತ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆಡಿಕಲ್ ಸ್ಟೋರ್ ಮಾಲೀಕನೊಬ್ಬ ತನ್ನ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾನೆ .

ದೇಶದಲ್ಲಿ ತ್ರಿವಳಿ ತಲಾಖ್ ಅನ್ನು ನ್ಯಾಯಾಲಯ ನಿಷೇಧಿಸಿದ್ದರೂ ಕೂಡ ಇದನ್ನು ಇಂದಿಗೂ ಅಲ್ಲಲ್ಲಿ ಬಳಸುತ್ತ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ.

ಈ ಕುರಿತು ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತನ್ನ ಪತಿ 15 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾನೆ. ಅದನ್ನು ವಿರೋಧಿಸಿದಾಗ ಅವನು ತನ್ನ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮಹಿಳೆ 2010ರಲ್ಲಿ ಮಲಿಹಾಬಾದ್ ಕಾಸ್ಮಂಡಿ ಕಲಾದ ಸದಾಫ್ ಮುನೀರ್ ಎಂಬಾತನನ್ನು ಮದುವೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಆತ ಮೆಡಿಕಲ್ ಸ್ಟೋರ್ ತೆರೆಯಲು 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಅವನ ಬೇಡಿಕೆ ಈಡೇರದಿದ್ದಾಗ, ಗರ್ಭಿಣಿಯಾಗಿದ್ದ ಆಕೆಗೆ ಗರ್ಭಪಾತ ಮಾಡಿಸಲು ಪ್ರಯತ್ನಿಸಿದ್ದಾನೆ. ಅದು ಸಾಧ್ಯವಾಗದಿದ್ದಾಗ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ. ಆಗ ಆಕೆಯ ಕುಟುಂಬವು ಹೇಗೋ 10 ಲಕ್ಷ ರೂ.ಗಳನ್ನು ವ್ಯವಸ್ಥೆ ಮಾಡಿ ಆತನಿಗೆ ನೀಡಿ ಮತ್ತೆ ಆಕೆಯನ್ನು ಗಂಡನ ಮನೆಗೆ ಕಳುಹಿಸಿತ್ತು.

ಇಷ್ಟಾದರೂ ಆತ, ಆಗಸ್ಟ್ 2022ರಲ್ಲಿ ಮತ್ತೆ ತನ್ನ ವ್ಯವಹಾರವನ್ನು ವಿಸ್ತರಿಸಲು ಇನ್ನೂ 15 ಲಕ್ಷ ರೂ.ಗಳನ್ನು ತರುವಂತೆ ಒತ್ತಡ ಹೇರಲು ಪ್ರಾರಂಭಿಸಿದ್ದಾನೆ. ಇದನ್ನು ಆಕೆ ನಿರಾಕರಿಸಿದ್ದಕ್ಕೆ ಆಕೆಯನ್ನು ಥಳಿಸಿ ಇಬ್ಬರು ಮಕ್ಕಳ ಜೊತೆ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ನಂತರ ಆಗಸ್ಟ್ 10, 2022ರಂದು ಆತ ವಾಟ್ಸಾಪ್‌ನಲ್ಲೇ ತ್ರಿವಳಿ ತಲಾಖ್ ಸಂದೇಶವನ್ನು ಕಳುಹಿಸಿದ್ದಾನೆ. ಈ ಬಗ್ಗೆ ವಿವರಿಸಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೇ ಆಕೆ ಮಕ್ಕಳ ಜೊತೆ ಮತ್ತೆ ಗಂಡನ ಮನೆಗೆ ಬಂದಾಗ ಅವರನ್ನು ಒಳಗೆ ಬಿಡಲಿಲ್ಲ ಮತ್ತು ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಮಹಿಳೆ ತಿಳಿಸಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here