ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಶೂಟರ್ ಸ್ವಪ್ನಿಲ್ ಕುಸಾಲೆ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಗುರುವಾರ ನಡೆದ 50 ಮೀ. ರೈಫಲ್ 3 ಪೊಸಿಶನ್ ಫೈನಲ್ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸ್ವಪ್ನಿಲ್ ಫೈನಲ್ ಪಂದ್ಯದ ಪ್ರೋನ್‌ನಲ್ಲಿ 156.8, ನೀಲಿಂಗ್‌ನಲ್ಲಿ 153.3 ಮತ್ತು ಸ್ಟ್ಯಾಂಡಿಂಗ್‌ನಲ್ಲಿ 195 ಅಂಕಗಳಿಸಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ್ಕಕೆ ಕೊರಳೊಡ್ಡಿದರು. 463.6 ಅಂಕ ಗಳಿಸಿದ ಚೀನಾದ ಲಿಯು ಯುಕುನ್ ಚಿನ್ನ ಮತ್ತು ಉಕ್ರೇನ್ನ ಕುಲಿಶ್ ಸೆರ್ಹಿ(461.3) ಬೆಳ್ಳಿ ಪದಕ ಗೆದ್ದರು.
‘ಸ್ವಪ್ನಿಲ್ ಕುಸಾಲೆಯವರ ಅಸಾಧಾರಣ ಪ್ರದರ್ಶನ. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಕಂಚಿನ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವರು ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಕೂಡ. ನಿಮ್ಮ ಈ ಸಾಧನೆ ಪ್ರತಿಯೊಬ್ಬ ಭಾರತೀಯನು ಸಂತೋಷಪಡುವಂತೆ ಮಾಡಿದೆ’ ಎಂದು ಮೋದಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.
‘ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಸ್ವಪ್ನಿಲ್ ಕುಸಾಲೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾರತ ಮೂರು ಪದಕ ಗೆದ್ದಿರುವುದು ಇದೇ ಮೊದಲು. ಇಡೀ ಶೂಟಿಂಗ್ ತಂಡ ಭಾರತಕ್ಕೆ ಹೆಮ್ಮೆ ತಂದಿದೆ. ಮುಂಬರುವ ಈವೆಂಟ್‌ಗಳಿಗಾಗಿ ನಾನು ನಮ್ಮ ಎಲ್ಲಾ ಆಟಗಾರರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಸ್ವಪ್ನಿಲ್ ಕುಸಾಲೆ ಅವರು ಭವಿಷ್ಯದಲ್ಲಿ ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲಲಿ ಎಂದು ಹಾರೈಸುತ್ತೇನೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.