ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ರಾಪ್ತ ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೆ ಗಂಭೀರ ಪ್ರಶ್ನೆ ಎತ್ತುವಂತಹ ಘಟನೆಯೊಂದು ಛತ್ತೀಸ್‌ಗಢದಲ್ಲಿ ವರದಿಯಾಗಿದೆ. ಐದು ವರ್ಷದ ಬಾಲಕಿಯನ್ನು ಐದು ದಿನಗಳ ಕಾಲ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಚಾಕೊಲೇಟ್ ನೀಡುವ ನೆಪದಲ್ಲಿ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಜನವರಿ 7ರಿಂದ 11ರವರೆಗೆ ನಿರಂತರವಾಗಿ ಹಿಂಸಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಈ ವಿಷಯವನ್ನು ಯಾರಿಗೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಿಂದ ಮಗು ಭಯದಿಂದ ಮೌನವಾಗಿಯೇ ಉಳಿದಿದ್ದಾಳೆ. ದೈಹಿಕ ನೋವು ತಾಳಲಾರದೆ ಕೊನೆಗೂ ಮನೆಯವರಿಗೆ ನಡೆದ ವಿಷಯವನ್ನು ತಿಳಿಸಿದ್ದಾಳೆ.
ಜನವರಿ 12ರಂದು ಸ್ನಾನದ ವೇಳೆ ಮಗುವಿಗೆ ತೀವ್ರ ನೋವಿರುವುದು ಗಮನಕ್ಕೆ ಬಂದ ನಂತರ ಕುಟುಂಬ ಸದಸ್ಯರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅನ್ಸಾರಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.


