ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕೊಲ್ಲಂನಲ್ಲಿ ಇರುವ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಹಾಸ್ಟೆಲ್‌ನ ಒಂದೇ ಕೋಣೆಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೃತರಾದವರು 17 ಮತ್ತು 15 ವರ್ಷದ ಹುಡುಗಿಯರಾಗಿದ್ದು, ಅವರು ಕ್ರಮವಾಗಿ ಕೋಳಿಕ್ಕೋಡ್ ಹಾಗೂ ತಿರುವನಂತಪುರಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ಗುರುವಾರ ಬೆಳಗಿನ ತರಬೇತಿ ಅವಧಿಗೆ ಇಬ್ಬರೂ ಹಾಜರಾಗದೇ ಇದ್ದುದನ್ನು ಗಮನಿಸಿದ ಸಹ ವಿದ್ಯಾರ್ಥಿಗಳು ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಹಾಸ್ಟೆಲ್ ಸಿಬ್ಬಂದಿ ಬಾಗಿಲು ತೆರೆದಾಗ, ಇಬ್ಬರೂ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
17 ವರ್ಷದ ವಿದ್ಯಾರ್ಥಿನಿ ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿದ್ದರೆ, 15 ವರ್ಷದ ಬಾಲಕಿ ಕಬಡ್ಡಿ ಆಟಗಾರ್ತಿಯಾಗಿದ್ದು 10ನೇ ತರಗತಿಯಲ್ಲಿ ಓದುತ್ತಿದ್ದಳು. 15 ವರ್ಷದ ಬಾಲಕಿ ಸಾಮಾನ್ಯವಾಗಿ ಬೇರೆ ಕೋಣೆಯಲ್ಲಿ ವಾಸವಿದ್ದರೂ, ಘಟನೆಗೂ ಮುನ್ನದ ರಾತ್ರಿ ಸ್ನೇಹಿತೆಯ ಕೋಣೆಯಲ್ಲಿ ತಂಗಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳದಿಂದ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಇಬ್ಬರೂ ಪರಸ್ಪರ ಮೊದಲೇ ಪರಿಚಿತರೇ, ಯಾವುದೇ ಮಾನಸಿಕ ಒತ್ತಡ ಅಥವಾ ಸಮಸ್ಯೆಗಳು ಇದ್ದವೇ ಎಂಬ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಿಖರ ಕಾರಣ ತನಿಖೆಯ ನಂತರವೇ ತಿಳಿಯಲಿದೆ.


