ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಎಸ್ಐ ಪರಶುರಾಮ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಪಿಎಸ್ಐ ಪತ್ನಿ ಶ್ವೇತಾ ಕೊಟ್ಟ ದೂರಿನನ್ವಯ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬಿಎನ್ಎಸ್ ಸೆಕ್ಷನ್ 108 ಅಡಿ ಪ್ರಕರಣ ದಾಖಲಾಗಿದ್ದು, ಕೇಸ್‌ನಲ್ಲಿ ಎ1 ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್, ಎ2 ಪುತ್ರ ಪಂಪನಗೌಡ ಹೆಸರು ಉಲ್ಲೇಖಿಸಲಾಗಿದೆ. ಸತತ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ, ಕೊನೆಗೂ ಎಫ್ಐಆರ್ ದಾಖಲಿಸಿಕೊಂಡಿದೆ.
ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ ಕೇಸ್ ದಾಖಲಾಗುತ್ತಿದ್ದಂತೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಪುತ್ರ ಪಂಪಣ್ಣಗೌಡ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೇಸ್ ದಾಖಲಾಗಿದ್ದರಿಂದ ಅಪ್ಪ-ಮಗ ತಲೆ ಮರೆಸಿಕೊಂಡಿದ್ದು, ಬೆಂಗಳೂರಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.
ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ ಶುಕ್ರವಾರ(ಆ.2) ನಿಧನರಾಗಿದ್ದರು. ಇತ್ತೀಚೆಗೆ ಸೈಬರ್ ಕ್ರೈಮ್ (Cyber Crime) ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ಪೊಲೀಸ್ ಕ್ವಾರ್ಟರ್ಸ್ ನಿವಾಸದಲ್ಲಿ ಶುಕ್ರವಾರ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದರು.
ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಪಿಎಸ್‌ಐ ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿ, ಸ್ಥಳೀಯ ದಲಿತ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿ ಶಾಸಕ, ಪುತ್ರನ ವಿರುದ್ಧ ದೂರು ನೀಡಿದ್ದರು.