ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ, ಸಮಾಜವಾದಿ ಪಕ್ಷದ ನಾಯಕನೂ ಆಗಿರುವ ಮೊಯೀದ್ ಖಾನ್ ಬೇಕರಿಯನ್ನು ಬುಲ್ಡೋಜರ್ ಮೂಲಕ ಯೋಗಿ ಆದಿತ್ಯನಾಥ್ ಸರ್ಕಾರವು ಧ್ವಂಸಗೊಳಿಸಿದೆ.
ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಮೊಯೀದ್ ಖಾನ್ ಪ್ರಮುಖ ಆರೋಪಿಯಾಗಿದ್ದಾನೆ. ಭದರ್ಸಾದಲ್ಲಿರುವ ಬೇಕರಿಯ ಮಾಲೀಕ ಮೊಯೀದ್ ಖಾನ್ ಆಗಿದ್ದು, ಬೇಕರಿಯಲ್ಲಿಯೇ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ತಿಳಿದುಬಂದಿದೆ.
ಫುಡ್ ಸೇಫ್ಟಿ ಡೆಪ್ಯೂಟಿ ಕಮಿಷನರ್ ಅವರು ಈಗಾಗಲೇ ಬೇಕರಿಯಲ್ಲಿರುವ ತಿನಿಸುಗಳ ತಪಾಸಣೆಗೆ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ, ಮೊಯೀದ್ ಖಾನ್ ಬೇಕರಿಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ.
ಆಗಸ್ಟ್ 2ರಂದು ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಭದರ್ಸಾದಲ್ಲಿರುವ ಮೊಯೀದ್ ಖಾನ್ ಬೇಕರಿಯನ್ನು ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್ ಹಾಗೂ ಎಸ್‌ಪಿ ರಾಜಕಿರಣ್ ನಾಯರ್ ನೇತೃತ್ವದಲ್ಲಿ ಧ್ವಂಸಗೊಳಿಸಲಾಗಿದೆ.
ಬೇಕರಿಯನ್ನು ಜಪ್ತಿ ಮಾಡಲಾಗಿದೆ. ತಪಾಸಣೆ ನಡೆಸಿದಾಗ ಬೇಕರಿಯಲ್ಲಿ ಅಕ್ರಮ ವಸ್ತುಗಳು ಪತ್ತೆಯಾಗಿವೆ. ಇದಾದ ಬಳಿಕ ಬೇಕರಿಯನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂಬುದಾಗಿ ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.
ಮೂರು ದಿನಗಳ ಹಿಂದಷ್ಟೇ ನಡುರಸ್ತೆಯಲ್ಲಿ ಯುಕವರ ಗುಂಪೊಂದು ನೀರು ಎರಚಿ ಕಿರುಕುಳ ಕೊಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಘಟನಾ ಸ್ಥಳ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯ ಎಲ್ಲಾ ಪೊಲೀಸರನ್ನು ಅಮಾನತುಗೊಳಿಸಿದ್ದರು.