ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಗೆ ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (NSCBI) ಸಂಪೂರ್ಣ ಜಲಾವೃತಗೊಂಡಿದೆ.
ಪಶ್ಚಿಮ ಬಂಗಾಳದ ರಾಜಧಾನಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ವಿಮಾನ ನಿಲ್ದಾಣದಲ್ಲೂ ನೀರು ತುಂಬಿಕೊಂಡಿದೆ. ವಿಮಾನ ನಿಲ್ದಾಣದ ರನ್‌ವೇ ಹಾಗೂ ಟ್ಯಾಕ್ಸಿವೇಗಳಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿವೆ.
ಹೌರಾ, ಸಾಲ್ಟ್ ಲೇಕ್ ಮತ್ತು ಬ್ಯಾರಕ್‌ಪುರ ಸೇರಿದಂತೆ ಕೋಲ್ಕತ್ತಾ ಮತ್ತು ಅದರ ನೆರೆಯ ಪ್ರದೇಶಗಳು ನಿರಂತರ ಮಳೆಯಿಂದ ಮುಳುಗಿ ಹೋಗಿದೆ.
ಹವಾಮಾನ ಇಲಾಖೆ ಪ್ರಕಾರ, ಬಂಗಾಳದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ಹೌರಾ, ಪಶ್ಚಿಮ ಬರ್ಧಮಾನ್, ಬಿರ್ಭುಮ್, ಪುರ್ಬಾ ಬರ್ಧಮಾನ್, ಹೂಗ್ಲಿ, ನಾಡಿಯಾ ಮತ್ತು ಉತ್ತರ ಮತ್ತು ದಕ್ಷಿಣ 24 ಪರಗಣಗಳು ಸೇರಿದಂತೆ ದಕ್ಷಿಣ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ. ಮಾನ್ಸೂನ್ ಕಾರಣದಿಂದ ಕೆಲವೆಡೆ ಮಳೆಯ ಆರ್ಭಟ ಇನ್ನೂ ಹೆಚ್ಚಾಗಲಿದೆ.
ಇನ್ನೂ ಕೋಲ್ಕತ್ತಾದ ಹಲವು ಭಾಗಗಳಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ. ಹಾಗಾಗಿ ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ತರುವುದು ಕಷ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ.