ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ಭಾನುವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮೂರು ಬೋಗಿಗಳು ಬೆಂಕಿಗಾಹುತಿಯಾಗಿದೆ.
ಕೊರ್ಬಾ-ವಿಶಾಖಾ ಎಕ್ಸ್‌ಪ್ರೆಸ್ ರೈಲಿನ ಮೂರು ಹವಾನಿಯಂತ್ರಿತ ಕೋಚ್ಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಂತಿದ್ದ ರೈಲಾಗಿದ್ದರಿಂದ ಬೆಂಕಿ ಹೊತ್ತಿಕೊಳ್ಳುವ ವೇಳೆಗೆ ಪ್ರಯಾಣಿಕರೆಲ್ಲಾ ಇಳಿದಿದ್ದರು. ರೈಲಿನ ಬಿ6, ಬಿ7, ಎಂ1 ಬೋಗಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಭಾರಿ ಬೆಂಕಿ ಅವಘಡದಿಂದ ರೈಲ್ವೆ ನಿಲ್ದಾಣದ ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ. ಕೂಡಲೇ ಎಚ್ಚೆತ್ತು ಬೆಂಕಿ ನಂದಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಬೆಳಗ್ಗೆ ಛತ್ತೀಸ್‌ಗಢದ ಕೊರ್ಬಾದಿಂದ ಪ್ಲಾಟ್‌ಫಾರ್ಮ್ ನಂಬರ್ ನಾಲ್ಕಕ್ಕೆ ಬಂದಿತ್ತು ಮತ್ತು ನಂತರ ತಿರುಪತಿಗೆ ಹೊರಡಬೇಕಿತ್ತು. ಕೊರ್ಬಾ ಎಕ್ಸ್‌ಪ್ರೆಸ್ ಬೆಳಿಗ್ಗೆ 6.30 ಕ್ಕೆ ಬಂದಿತು ಮತ್ತು ಕೋಚಿಂಗ್ ಡಿಪೋಗೆ ನಿರ್ವಹಣೆಗಾಗಿ ಹೋಗಬೇಕಾಗಿತ್ತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲಿಗೆ ಬೀಗ ಹಾಕಲಾಗಿದ್ದು, ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂದರು.
ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ ಫಕೀರಪ್ಪ ತಿಳಿಸಿದ್ದಾರೆ. ಬೆಂಕಿಯ ಕಾರಣದ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.