ಹೊಸದಿಗಂತ ವರದಿ, ಮಂಡ್ಯ:
ನಾವು ಜಲಾಶಯ ನಿರ್ಮಾಣ ಮಾಡಿರುವುದು ತಮಿಳುನಾಡಿಗೆ ಬಿಡುವುದಕ್ಕಲ್ಲ. ನಮ್ಮ ರೈತರಿಗೆ ನೀರು ಕೊಡಲು ಕನ್ನಂಬಾಡಿ ಅಣೆಕಟ್ಟೆ ಕಟ್ಟಲಾಗಿದೆ. ನೀರಿದೆ ಸಾಕಷ್ಟು ನೀರನ್ನು ಕೊಡಲಾಗುವುದು ಎಂದು ಶಾಸಕ ಪಿ. ರವಿಕುಮಾರ್ ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟು ನೀರು ಪದ್ಧತಿ ಪ್ರಕಾರ ರೈತರಿಗೆ ನೀರು ಕೊಡಲಾಗುವುದು ಎಂದು ಯಾರೋ ಇಂಜಿನಿಯರ್ ತಿಳಿಸಿದ್ದಾರೆ. ಏಕೆ ಈ ರೀತಿ ಹೇಳಿಕೆ ನೀಡಿದ್ದಾರೋ ತಿಳಿಯದು. ಕೆ.ಆರ್.ಎಸ್.ನಲ್ಲಿ ಸಾಕಷ್ಟು ನೀರಿದೆ ಮುಂದಿನ ಫೆಬ್ರುವರಿವರೆಗೆ ನೀರು ಕೊಡಲು ಯಾವುದೇ ತೊಂದರೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೇಜವಾಬ್ದಾರಿ ಹೇಳಿಕೆ ನೀಡಿರುವ ಇಂಜಿನಿಯರ್‌ನ್ನು ಅಮಾನತ್ತುಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದು ಶಿಫಾರಸ್ಸು ಮಾಡುತ್ತೇನೆ. ಕನ್ನಂಬಾಡಿಯಲ್ಲಿ ನೀರಿಟ್ಟುಕೊಂಡು ನಾವು ಬಾಯಿಗೆ ಮಣ್ಣು ಹಾಕಿಕೊಳ್ಳಬೇಕೇ, ಯಾಕೆ ಈ ರೀತಿ ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೋ ತಿಳಿಯದು ಎಂದು ಹೇಳಿದರು.
ನಮಗೆ ಹುಲಿಕೆರೆ ಟನಲ್‌ನಲ್ಲಿ ಎಷ್ಟೇ ನೀರು ಬಿಟ್ಟರೂ 2500 ಕ್ಯೂಸೆಕ್ಸ್ ಮಾತ್ರ. ಮಳೆ ಬಂದು ಹೆಚ್ಚುವರಿ ನೀರು ಹೋಗಿದ್ದರೂ, ನಾವು ಹೆದುವಷ್ಟು ಮೂರ್ಖರಲ್ಲ ಕನ್ನಡಿಗರು. ನಮ್ಮಲ್ಲಿ ಸಾಕಷ್ಟು ನೀರಿದೆ. ಮಂಡ್ಯದಲ್ಲಿ ಬೆಳೆ ಬೆಳೆಯುವುದಕ್ಕೆ ನೀರು ಕೊಡುತ್ತೇವೆ. ಕೊಡದಿದ್ದರೂ ನಾವು ಕೊಡಿಸುತ್ತೇವೆ ಇದರಲ್ಲಿ ಯಾವುದೇ ಸಂಶಯವೂ ಇಲ್ಲ ಎಂದು ತಿಳಿಸಿದರು.