ಹೊಸದಿಗಂತ ಡಿಜಿಟಲ್ ಡೆಸ್ಕ್;
ವಯನಾಡು ಭೂಕುಸಿತದಿಂದ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಈ ದುರಂತದಲ್ಲಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ.
ಹೀಗಿರುವಾಗ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ರಶ್ಮಿಕಾ ಮಂದಣ್ಣ, ಮೋಹನ್ ಲಾಲ್, ಸೂರ್ಯ, ಜ್ಯೋತಿಕಾ, ಕಾರ್ತಿ, ವಿಕ್ರಮ್ ಸೇರಿದಂತೆ ಅನೇಕ ಕಲಾವಿದರು ದೇಣಿಗೆ ನೀಡಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಆಗಿರುವುದು ನಟ ಅಲ್ಲು ಅರ್ಜುನ್.
ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ವಯನಾಡು ಭೂಕುಸಿತದ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಲ್ಲು ಅರ್ಜುನ್ ಅವರು ಹಣವನ್ನು ನೀಡಿದ್ದಾರೆ. ಅವರು ನೀಡಿರುವ 25 ಲಕ್ಷ ರೂಪಾಯಿಯಿಂದ ಸಂತ್ರಸ್ತರಿಗೆ ವಿವಿಧ ರೀತಿಯ ಸೌಕರ್ಯಗಳನ್ನು ನೀಡಲು ಸಹಾಯ ಆಗುತ್ತದೆ. ಔಷಧಿ, ಆಹಾರ, ಬಟ್ಟೆ ಮುಂತಾದ ವಸ್ತುಗಳನ್ನು ನೀಡಲಾಗುವುದು. ಅಲ್ಲದೇ, ರಕ್ಷಣಾ ಕಾರ್ಯಾಚರಣೆಗೂ ಈ ದೇಣಿಗೆಯಿಂದ ಅನುಕೂಲ ಆಗಲಿದೆ.