ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆಯೇ ರಾಜ್ಯ ರಾಜಕೀಯಕ್ಕೆ ತಮ್ಮ ಮರಳುವಿಕೆಯ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. “ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಎಂದು ಯಾರಾದರೂ ಭಾವಿಸಿದ್ದರೆ ಅದು ತಪ್ಪು. ನಾನು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತೇನೆ,” ಎಂದು ಘೋಷಿಸಿದ್ದಾರೆ.
ಪ್ರಸ್ತುತ ಕೇಂದ್ರದಲ್ಲಿ ಪ್ರಧಾನಿಗಳು ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ ಅವರು, “ರಾಜ್ಯದಲ್ಲಿ ಉತ್ತಮ ಸರ್ಕಾರ ತರುವುದು ನನ್ನ ವೈಯಕ್ತಿಕ ಉದ್ದೇಶವಾಗಿದೆ. ಜನರು ನಾನು ಎಲ್ಲಿರಬೇಕು ಎಂದು ಬಯಸುತ್ತಾರೋ ಅಲ್ಲಿ ಇರುತ್ತೇನೆ. ರಾಜ್ಯ ರಾಜಕೀಯಕ್ಕೆ ಬರಲೇಬೇಕಾದ ಅನಿವಾರ್ಯತೆ ಇದೆ, ಆದರೆ ಅದು ಯಾವಾಗ ಎಂಬ ಸಮಯವನ್ನು ನಾನೇ ನಿರ್ಧರಿಸುತ್ತೇನೆ,” ಎಂದರು. ಅಲ್ಲದೆ, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣವನ್ನು ಖಂಡಿಸಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಈ ಸರ್ಕಾರ ಬಂದ ಮೇಲೆ ಅಧಿಕಾರಿಗಳ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಆಡಳಿತದ ಚುಕ್ಕಾಣಿ ಹಿಡಿದವರು ಸರಿಯಿಲ್ಲದಿದ್ದರೆ ಇಂತಹ ಕಾನೂನುಬಾಹಿರ ಕೃತ್ಯಗಳು ನಡೆಯುತ್ತವೆ. ಮೇಲಧಿಕಾರಿಗಳು ಈ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ,” ಎಂದು ಕಿಡಿಕಾರಿದರು.


