January15, 2026
Thursday, January 15, 2026
spot_img

ಇರಾನ್‌ನಲ್ಲಿ ನಿಲ್ಲದ ಪ್ರತಿಭಟನೆ: 3,428 ಕ್ಕೂ ಹೆಚ್ಚು ಮಂದಿ ಸಾವು, 15 ಸಾವಿರಕ್ಕೂ ಅಧಿಕ ಜನರ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ಹಿಸಾಚಾರಕ್ಕೆ ತಿರುಗಿದ್ದು, 3,428 ಕ್ಕೂ ಹೆಚ್ಚು ಮಂದಿ ಇರಾನ್ ನಾಗರಿಕರು ಸಾವನ್ನಪ್ಪಿದ್ದಾರೆ. ಹದಿನೈದು ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

ಇರಾನ್‌ನಲ್ಲಿ ಸರ್ವಾಧಿಕಾರಿ ಆಲಿ ಖಮೇನಿ ವಿರುದ್ಧ ಬೀದಿಗಿಳಿದು ಜನರ ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 8ರಿಂದ 12ರ ವರೆಗೆ ನಡೆದ ಪ್ರತಿಭಟನೆಗಳ ಅವಧಿಯಲ್ಲಿ 3,379 ಮಂದಿ ಸಾವನ್ನಪ್ಪಿದ್ದಾರೆ ಎಂದು IHR ಹೇಳಿದೆ. ಇದಕ್ಕೂ ಮೊದಲು ಅಮೆರಿಕ ಮೂಲದ ಹ್ಯೂಮನ್ ರೈಟ್ಸ್ ಆಕ್ಟಿವಿಸ್ಟ್ಸ್ ನ್ಯೂಸ್ ಏಜೆನ್ಸಿ ಬುಧವಾರ ಬೆಳಿಗ್ಗೆ ಕನಿಷ್ಠ 2,571 ಮಂದಿ ಸತ್ತಿದ್ದಾರೆ ಎಂದು ವರದಿ ಮಾಡಿತ್ತು. ಇರಾನ್ ಸರ್ಕಾರಿ ಟಿವಿ ಹಲವು ಮಂದಿ ಹುತಾತ್ಮರಾಗಿದ್ದಾರೆ ಎಂದು ಒಪ್ಪಿಕೊಂಡಿದ್ದರೂ, ನಿಖರ ಸಂಖ್ಯೆಯನ್ನು ಪ್ರಕಟಿಸಿಲ್ಲ.

ಇರಾನ್‌ನಲ್ಲಿ ಪ್ರತಿಭಟನಕಾರರ ಮೇಲೆ ಹಲ್ಲೆ, ದಾಳಿ ಹಾಗೂ ಹತ್ಯೆ ನಡೆಸಿದರೆ ಅಥವಾ ಗಲ್ಲು ಶಿಕ್ಷೆ‌ಕೊಡುವ ಕೆಲಸ ಮಾಡಿದರೆ ಅಮೆರಿಕಾ ಮಧ್ಯಪ್ರವೇಶ ಮಾಡಲಿದೆ ಎಂದು ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ಕತಾರ್ ಏರ್ ಬೇಸ್ ಮೂಲಕ ಇರಾನ್ ಮೇಲೆ ಅಮೆರಿಕ ವಾಯು ದಾಳಿ ಮಾಡಬಹುದು ಎನ್ನಲಾಗಿತ್ತು. ಈ ಬೆದರಿಕೆ ಬೆನ್ನಲ್ಲೇ ಇರಾನ್ ಸರ್ಕಾರ ಪ್ರತಿಭಟನಕಾರರ ವಿರುದ್ಧ ತ್ವರಿತ ವಿಚಾರಣೆಗಳು ಮತ್ತು ಮರಣದಂಡನೆಗಳನ್ನು ನಿಲ್ಲಿಸಿದೆ ಎಂದು ಘೋಷಿಸಿದೆ. ಈ ಬಗ್ಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಇಂದು ಅಥವಾ ನಾಳೆ ಗಲ್ಲಿಗೇರಿಸುವುದಿಲ್ಲ, ಮರಣದಂಡನೆಯ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ.

ತನ್ನ ಮೇಲೆ ದಾಳಿ ಮಾಡುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸತತ ಸುಳಿವುಗಳನ್ನು ನೀಡುತ್ತಿರುವ ಬೆನ್ನಲ್ಲೇ ಇರಾನ್ ಸಮರಭ್ಯಾಸ ಆರಂಭಿಸಿದೆ. ಇದೇ ವೇಳೆ, ಅಮೆರಿಕವು ನಮ್ಮ ಮೇಲೆ ದಾಳಿ ಮಾಡಿದರೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹೊಂದಿರುವ 3 ಸೇನಾ ನೆಲೆಗಳ ಮೇಲೆ ದಾಳಿ ಮಾಡಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ. ಈ ಬಗ್ಗೆ ಮಾತನಾಡಿರುವ ಇರಾನ್ ರಾಜತಾಂತ್ರಿಕರು, ನಾವು ಎಲ್ಲ ಶಸ್ತ್ರಾಸ್ತ್ರ, ಸೇನೆಯನ್ನು ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ ಕತಾರ್‌ನಲ್ಲಿನ ಅಮೆರಿಕದ ಸೇನಾನೆಲೆ ಸೇರಿ ಮಧ್ಯಪ್ರಾಚ್ಯದಲ್ಲಿನ 3 ಅಮೆರಿಕ ನೆಲೆಗಳ ಮೇಲೆ ದಾಳಿ ಮಾಡಲಿದ್ದೇವೆ ಎಂದಿದ್ದಾರೆ. ಇದರ ಬೆನ್ನಲ್ಲೇ ಕತಾರ್‌ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯಿಂದ ಹೊರಹೋಗುವಂತೆ ಕೆಲವು ಸಿಬ್ಬಂದಿಗೆ ಆ ದೇಶ ಸೂಚಿಸಿದೆ ಎಂದು ಮೂವರು ರಾಜತಾಂತ್ರಿಕರು ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಇರಾನ್ ಮುನ್ನಚ್ಚರಿಕೆ ಭಾಗವಾಗಿ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಯಾವುದೇ ಪ್ರಯಾಣಿಕ, ಯುದ್ಧ ವಿಮಾನಗಳ ಹಾರಾಟಕ್ಕೆ ನಿಷೇಧಿಸಿದೆ.
.

Must Read

error: Content is protected !!