ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೌರಾಯುಕ್ತರಿಗೆ ರಾಜೀವ್ ಗೌಡ ಬೆದರಿಕೆ ಹಾಕಿದ ಪ್ರಕರಣ ಹಾಗೂ ರಾಜ್ಯದಲ್ಲಿ ಅಧಿಕಾರಿಗಳ ರಕ್ಷಣೆಯ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜೀವ್ ಗೌಡ ಪ್ರಕರಣದ ಬಗ್ಗೆ ಮಾತನಾಡಿದ ಸಚಿವರು, “ಯಾರೇ ಆಗಲಿ ಕಾನೂನಿಗಿಂತ ಮಿಗಿಲಲ್ಲ. ಪೌರಾಯುಕ್ತರ ವಿರುದ್ಧ ನಡೆಸಿರುವ ವಾಗ್ದಾಳಿ ಖಂಡನೀಯ. ಇದನ್ನು ಸಮರ್ಥಿಸಿಕೊಳ್ಳುವುದು ಅಕ್ಷಮ್ಯ. ಸಂವಿಧಾನದಲ್ಲಿ ಯಾರಿಗೂ ಇತರರನ್ನು ನಿಂದಿಸುವ ಅಥವಾ ಅವಾಚ್ಯ ಶಬ್ದಗಳಿಂದ ಕರೆಯುವ ಹಕ್ಕಿಲ್ಲ. ಈ ಬಗ್ಗೆ ಪಕ್ಷದ ಅಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.
“ಅಧಿಕಾರಿಗಳಿಗೆ ರಕ್ಷಣೆ ಇಲ್ಲ” ಎಂಬ ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಿದ ಅವರು, “ಬಿಜೆಪಿಯವರಿಂದ ನಾವು ಸಂಸ್ಕೃತಿ ಕಲಿಯಬೇಕಾದ ಅಗತ್ಯವಿಲ್ಲ. ಸರ್ವ ಧರ್ಮ ಗ್ರಂಥಗಳ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಕನಿಷ್ಠ ಸಂಸ್ಕೃತಿಯೂ ಇಲ್ಲ” ಎಂದು ಆಕ್ರೋಶ ಹೊರಹಾಕಿದರು.
ಗ್ರಾಮೀಣ ಭಾಗದ ಜನರಿಗೆ ಜೀವನಾಧಾರವಾಗಿರುವ ಮನರೇಗಾ ಯೋಜನೆಯ ಅನುದಾನ ಕಡಿತದ ಕುರಿತು ಚರ್ಚಿಸಲು ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಬಗ್ಗೆ ಮಾತನಾಡಿದ ಖರ್ಗೆ, “ಕೇಂದ್ರ ಸರ್ಕಾರ ರಾಜ್ಯದ ಗ್ರಾಮೀಣ ಜನರಿಗೆ ದೊಡ್ಡ ಅನ್ಯಾಯ ಮಾಡಿದೆ. ಇದನ್ನು ನಾವು ಕಾನೂನಾತ್ಮಕವಾಗಿ ಮಾತ್ರವಲ್ಲದೆ, ಜನರ ನ್ಯಾಯಾಲಯದಲ್ಲೂ ಪ್ರಶ್ನಿಸುತ್ತೇವೆ” ಎಂದರು.


