ಹೊಸದಿಗಂತ ಡಿಜಿಟಲ್ ಡೆಸ್ಕ್;
ವಾಲ್ಮೀಕಿ ನಿಗಮದ ಹಗರಣದಲ್ಲಿ ಹೈದರಾಬಾದ್ ಮೂಲದ ಆರೋಪಿ ಸತ್ಯನಾರಾಯಣ ವರ್ಮಾನನ್ನು ಕಸ್ಟಡಿಗೆ ಕೋರಿ ಜಾರಿ ನಿರ್ದೇಶನಾಲಯ (ಇಡಿ) ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಇದೀಗ ಕೋರ್ಟ್ ಆಗಸ್ಟ್ 13ರಂದು ಇಡಿ ಕಸ್ಟಡಿಗೆ ನೀಡುವಂತೆ ಆದೇಶ ಹೊರಡಿಸಿದೆ.
ಇಡಿ ಕಸ್ಟಡಿಗೆ ನೀಡುವಂತೆ ಸೆಷನ್ಸ್ ಕೋರ್ಟ್ ಆದೇಶವಿದ್ದರೂ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಹೀಗಾಗಿ ಪೊಲೀಸರ ಕ್ರಮಕ್ಕೆ ಇಡಿ ಪರ ಎಸ್‌ಪಿಪಿ ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.
ಇದೀಗ ಇಡಿ ತನಿಖೆ ತಪ್ಪಿಸಲು ಪೊಲೀಸರು ತಂತ್ರ ಹೂಡಿದಂತಿದೆ ಎಂದು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ. ಆಗಸ್ಟ್ 12ಕ್ಕೆ ಪೊಲೀಸ್ ಕಸ್ಟಡಿ ಮುಕ್ತಾಯಗೊಳ್ಳಲಿದ್ದು, ಆಗಸ್ಟ್ 13 ರಂದು ಜಾರಿ ನಿರ್ದೇಶನಾಲಯ ಕಸ್ಟಡಿಗೆ ನೀಡುವಂತೆ ಆದೇಶಿಸಲಾಗಿದೆ.
ಹೈದರಾಬಾದ್ ಮೂಲದ ಸತ್ಯನಾರಾಯಣ ನನ್ನು ಎಸ್ಐಟಿ ಅಧಿಕಾರಿಗಳು ಸದ್ಯ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಈ ಹಗರಣದ ಆರೋಪಿಯಾಗಿರುವ ಸತ್ಯನಾರಾಯಣ ನಿಗಮದಲ್ಲಿ ದೋಚಿದ್ದ ಹಣದಲ್ಲೇ ಕೋಟಿ ಕೋಟಿ ರೂ. ಬೆಲೆ ಬಾಳುವ ಸೆಕೆಂಡ್ ಹ್ಯಾಂಡ್ ಲ್ಯಾಂಬೋರ್ಗಿನಿ ಮತ್ತು ಬೆಂಜ್ ಕಾರು ಖರೀದಿಸಿದ ಬಗ್ಗೆ ಎಸ್ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದರು. ಬಳಿಕ ಆ ಕಾರುಗಳನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಿ ಕೋಟ್ಯಾಂತರ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಹಗರಣದಲ್ಲಿ ಸತ್ಯನಾರಾಯಣ್ ವರ್ಮಾ 13ನೇ ಆರೋಪಿಯಾಗಿದ್ದಾರೆ.