ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢ ಬಿಜಾಪುರ ಜಿಲ್ಲೆಯಲ್ಲಿ ಬರೋಬ್ಬರಿ 52 ಜನ ಮಾವೋವಾದಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಶಸ್ತ್ರತ್ಯಾಗ ಮಾಡಿ ಶರಣಾಗಿದ್ದಾರೆ. ವಿಶೇಷವೆಂದರೆ, ಶರಣಾದವರಲ್ಲಿ 49 ನಕ್ಸಲರ ತಲೆಗೆ ಸರ್ಕಾರ ಒಟ್ಟಾರೆಯಾಗಿ 1.41 ಕೋಟಿ ರೂಪಾಯಿಗೂ ಅಧಿಕ ಬಹುಮಾನವನ್ನು ಘೋಷಿಸಿತ್ತು.
ದೇಶದಿಂದ ಎಡಪಂಥೀಯ ತೀವ್ರವಾದವನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರವು ಇದೇ ಮಾರ್ಚ್ 31 ರ (2026) ಗಡುವನ್ನು ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ ಮತ್ತು ಸರ್ಕಾರದ ಪುನರ್ವಸತಿ ನೀತಿಗಳು ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗುತ್ತಿವೆ.
ಬಿಜಾಪುರ ಎಸ್ಪಿ ಜಿತೇಂದ್ರ ಕುಮಾರ್ ಯಾದವ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಶರಣಾದ 52 ಮಾವೋವಾದಿಗಳಲ್ಲಿ 21 ಜನ ಮಹಿಳೆಯರಿದ್ದಾರೆ. ಇವರೆಲ್ಲರೂ ದಂಡಕಾರಣ್ಯ ವಿಶೇಷ ವಲಯ ಸಮಿತಿ, ಆಂಧ್ರ-ಒಡಿಶಾ ಗಡಿ ವಿಭಾಗ ಮತ್ತು ಮಹಾರಾಷ್ಟ್ರದ ಭಾಮರಗಢ ಏರಿಯಾ ಕಮಿಟಿಗಳಲ್ಲಿ ಸಕ್ರಿಯರಾಗಿದ್ದರು.
ಪ್ರಮುಖ ಶರಣಾಗತರು ಮತ್ತು ಬಹುಮಾನದ ವಿವರ
ಲಖು ಕರಮ್ ಅಲಿಯಾಸ್ ಅನಿಲ್ (32): ಮಾವೋವಾದಿಗಳ ಡಿವಿಷನಲ್ ಕಮಿಟಿ ಸದಸ್ಯ. ಇತನ ತಲೆಗೆ 8 ಲಕ್ಷ ರೂ. ಬಹುಮಾನವಿತ್ತು. ಲಕ್ಷ್ಮಿ ಮದ್ವಿ (28): ಪ್ಲಟೂನ್ ಪಾರ್ಟಿ ಕಮಿಟಿ ಸದಸ್ಯೆ (8 ಲಕ್ಷ ರೂ. ಬಹುಮಾನ). ಚಿನ್ನಿ ಸೋಧಿ ಅಲಿಯಾಸ್ ಶಾಂತಿ (28): ಪ್ಲಟೂನ್ ಪಾರ್ಟಿ ಕಮಿಟಿ ಸದಸ್ಯೆ (8 ಲಕ್ಷ ರೂ. ಬಹುಮಾನ). ಇವರಲ್ಲದೆ, 13 ನಕ್ಸಲರ ತಲೆಗೆ ತಲಾ 5 ಲಕ್ಷ ರೂ., 19 ನಕ್ಸಲರ ತಲೆಗೆ ತಲಾ 2 ಲಕ್ಷ ರೂ. ಮತ್ತು 14 ಸದಸ್ಯರ ತಲೆಗೆ ತಲಾ 1 ಲಕ್ಷ ರೂ. ಬಹುಮಾನ ನಿಗದಿಪಡಿಸಲಾಗಿತ್ತು. ಒಟ್ಟಾರೆಯಾಗಿ ಶರಣಾದ 49 ಜನರ ಮೇಲಿದ್ದ ಒಟ್ಟು ಬಹುಮಾನದ ಮೊತ್ತ 1.41 ಕೋಟಿ ರೂ.ಗಳಷ್ಟಾಗುತ್ತದೆ.
ಮಾವೋವಾದಿಗಳು ಹಿಂಸಾಮಾರ್ಗ ಬಿಟ್ಟು ಜನಜೀವನದ ಮುಖ್ಯವಾಹಿನಿಗೆ ಮರಳಲು ಬಿಜಾಪುರ ಪೊಲೀಸರು ಹಮ್ಮಿಕೊಂಡಿರುವ ‘ಪೂನಾ ಮರ್ಗೆಮ್’ (ಹೊಸ ಹಾದಿ) ಅಭಿಯಾನವು ಈ ಶರಣಾಗತಿಗೆ ಪ್ರಮುಖ ಕಾರಣವಾಗಿದೆ. ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಗೆ ಆಕರ್ಷಿತರಾಗಿ, ಹಿಂಸೆಯಿಂದ ಬೇಸತ್ತು ಇವರು ಶಸ್ತ್ರತ್ಯಾಗ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶರಣಾದ ಪ್ರತಿಯೊಬ್ಬ ನಕ್ಸಲನಿಗೂ ತಕ್ಷಣದ ನೆರವಿನ ರೂಪದಲ್ಲಿ ತಲಾ 50,000 ರೂ. ಗಳನ್ನು ನೀಡಲಾಗುವುದು ಮತ್ತು ಸರ್ಕಾರದ ನೀತಿಯನ್ವಯ ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.


